ಸಾಗರ: ಶಿವಮೊಗ್ಗ ಹಾಗೂ ಕರಾವಳಿ ಭಾಗಕ್ಕೆ ಸಂಪರ್ಕ ಕಲ್ಪಿಸುವ ಹಸಿರುಮಕ್ಕಿ ಸೇತುವೆ ನಿರ್ಮಾಣ ಕಾಮಗಾರಿ ಬಹುತೇಕ ಮುಕ್ತಾಯ ಹಂತಕ್ಕೆ ತಲುಪಿದೆ. ಒಂದೂವರೆ ತಿಂಗಳೊಳಗೆ ಉದ್ಘಾಟನೆಗೊಳ್ಳಲಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೇತುವೆಯ ಎರಡೂ ಬದಿ ರಸ್ತೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸುವ ಕುರಿತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರೊಂದಿಗೆ ಚರ್ಚಿಸಲಾಗಿದೆ. ಈ ಹಿಂದೆ ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರ ಸಿಗಂದೂರು ಸೇತುವೆಯ ಪ್ರಾಮುಖ್ಯತೆ ಕಡಿಮೆಯಾಗಬಾರದು ಎಂಬ ಕಾರಣಕ್ಕೆ ತಾಂತ್ರಿಕ ನೆಪ ಹೇಳಿ ಹಸಿರುಮಕ್ಕಿ ಸೇತುವೆ ಕಾಮಗಾರಿ ವಿಳಂಬಗೊಳಿಸಿತ್ತು ಎಂದು ಆರೋಪಿಸಿದರು.

ಶರಾವತಿ ಹಿನ್ನೀರಿನ ಮುಪ್ಪಾನೆಯಲ್ಲಿ ಕೆಟ್ಟು ನಿಂತಿದ್ದ ಲಾಂಚ್ ಪುನರಾರಂಭದ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಮಾಜಿ ಶಾಸಕ ಹರತಾಳು ಹಾಲಪ್ಪ ಅವರು ತಾವು ಮಾಡಿದ್ದಾಗಿ ಹೇಳಿಕೊಂಡು ಪ್ರಚಾರ ಪಡೆಯುತ್ತಿರುವುದು ಹಾಸ್ಯಾಸ್ಪದ. ಅಧಿಕಾರದಲ್ಲಿದ್ದಾಗ ಜನರನ್ನು ದೂರವಿಟ್ಟಿದ್ದ ಹಾಲಪ್ಪ, ಚುನಾವಣೆ ಹತ್ತಿರ ಬರುತ್ತಿದ್ದಂತೆ ಮೆರವಣಿಗೆಗಳಲ್ಲಿ ನೃತ್ಯ ಮಾಡುತ್ತಾ ಮನರಂಜನೆ ನೀಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕಲಸೆ ಚಂದ್ರಪ್ಪ, ಐ.ಎನ್. ಸುರೇಶ್ ಬಾಬು, ಸೋಮಶೇಖರ್ ಲ್ಯಾವಿಗೆರೆ, ಗಣಪತಿ ಮಂಡಗಳಲೆ, ಮಧು ಮಾಲತಿ, ಎಲ್. ಚಂದ್ರಪ್ಪ, ಎನ್. ಉಷಾ, ಪ್ರಭಾವತಿ ಚಂದ್ರಕಾಂತ್, ಸದ್ದಾಂ, ಡಿ.ದಿನೇಶ್, ಭೀಮನೇರಿ ಆನಂದ, ತಾರಾಮೂರ್ತಿ, ಮಹಾಬಲಕೌತಿ ಹಾಗೂ ಗಿರೀಶ್ ಕೋವಿ ಉಪಸ್ಥಿತರಿದ್ದರು.