ಸಾಗರ: ಲಿಂಗನಮಕ್ಕಿ ಜಲಾಶಯದ ಶರಾವತಿ ಹಿನ್ನೀರಿನ ಮಟ್ಟ ಕನಿಷ್ಠ ಮಟ್ಟಕ್ಕೆ ಇಳಿದ ಹಿನ್ನೆಲೆ ಹಲ್ಕೆ–ಮುಪ್ಪಾನೆ ಮಾರ್ಗದ ಲಾಂಚ್ ಸೇವೆ ಜೂನ್ 2ರಿಂದ ಸ್ಥಗಿತಗೊಳ್ಳಲಿದೆ. ಈ ಸಂಬಂಧ ಬಂದರು ಇಲಾಖೆ ಪ್ರಕಟಣೆ ತಿಳಿಸಿದೆ.
ಕರೂರು, ಭಾರಂಗಿ ಸಂಪರ್ಕ ಮಾರ್ಗ
ಕರೂರು ಮತ್ತು ಭಾರಂಗಿ ಹೋಬಳಿಯ ಸಂಪರ್ಕದ ಅತಿ ಮುಖ್ಯ ಮಾರ್ಗ ಇದಾಗಿದೆ. ಸಿಗಂದೂರು ಸೇತುವೆ ಆದ ಮೇಲೂ ಕರೂರು ಹೋಬಳಿಗೆ ಈ ಮಾರ್ಗ ಹಲವು ಕಾರಣಗಳಿಂದ ಮಹತ್ವದ್ದಾಗಿದೆ. ಕರೂರು ಹೋಬಳಿ ಪೊಲೀಸ್ ಠಾಣೆ ಮತ್ತು ಮೆಸ್ಕಾಂ ಕಚೇರಿಗಳು ಕಾರ್ಗಲ್, ಜೋಗ್‌ದಲ್ಲಿವೆ. ಗ್ಯಾಸ್ ಸಿಲಿಂಡರ್ ಪಡೆಯಲು ಹಾಗೂ ಮತ್ತಿತರ ಕಾರಣಕ್ಕೆ ತುಮರಿ, ಸಿಗಂದೂರು, ಭಾರಂಗಿ ಹೋಬಳಿಯ ಜನ ಈ ಮಾರ್ಗದಲ್ಲೇ ಸಂಚರಿಸುತ್ತಾರೆ. ಶಿರಸಿ–ಸಿದ್ದಾಪುರ ಭಾಗದ ಜನರೂ ಸಿಗಂದೂರಿಗೆ ಬರಲು ಈ ಮಾರ್ಗವಾಗಿ ಓಡಾಡುತ್ತಾರೆ.

ನೀರಿನ ಮಟ್ಟ ಇಳಿಕೆ, ಕಾಂಡದಿಂದ ಸಮಸ್ಯೆ
ಶರಾವತಿ ಹಿನ್ನೀರು ಭಾಗದಲ್ಲಿ ಇದೀಗ ನೀರಿನ ಮಟ್ಟ ದಿನೇ ದಿನೇ ಕೆಳಗಿಳಿಯುತ್ತಿದೆ. ನೀರಿನ ಆಳದಲ್ಲಿರುವ ಮರದ ಕಾಂಡಗಳು ಲಾಂಚ್‌ಗೆ ತಗಲುವ ಅಪಾಯವಿದೆ. ವಾಹನ ಇಳಿಸುವ ಪ್ಲಾಟ್‌ಫಾರ್ಮ್ ಜಾಗದಲ್ಲಿ ಲಾಂಚ್ ಅಡಿ ಭಾಗ ನೆಲಕ್ಕೆ ತಾಗುತ್ತಿರುವುದರಿಂದ ಸೋಮವಾರವೇ ಇಲ್ಲಿನ ಸಂಚಾರ ಕೊನೆಯಾಗಿದೆ.
ತಾತ್ಕಾಲಿಕವಾಗಿ ಲಾಂಚ್ ಸಂಚಾರ ಕೊನೆಗೊಂಡರೂ, ಮಳೆ ಹೆಚ್ಚಾಗಿ ನೀರಿನ ಮಟ್ಟ ಏರಿದಲ್ಲಿ ಲಾಂಚ್ ಸಂಚಾರ ಪುನರಾರಂಭವಾಗಲಿದೆ ಎಂದು ಬಂದರು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

