ಸಾಗರ: ಇಸ್ತ್ರಿ ಅಂಗಡಿ ನಡೆಸುತ್ತಿದ್ದ ಜೆ.ಪಿ. ನಗರದ ಪರಶುರಾಮ ನಿಗೂಢ ಸಾವು ಮೊದಲಿಗೆ ಆತ್ಮಹತ್ಯೆ ಎಂದು ಬಿಂಬಿಸಲಾಗಿತ್ತು. ಆದರೆ ಪೊಲೀಸರ ತನಿಖೆಯಿಂದಾಗಿ ಅಸಲಿ ಸತ್ಯ ಹೊರಬಿದ್ದಿದೆ. ಇದು ಅಕ್ರಮ ಸಂಬಂಧಕ್ಕಾಗಿ ನಡೆದ ಕೊಲೆ ಎಂಬುದು ಬೆಳಕಿಗೆ ಬಂದಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪೊಲೀಸರ ಅನುಮಾನಕ್ಕೆ ಸಿಕ್ಕಿತು ಸುಳಿವು
ಮೇ 15ರಂದು ಪರಶುರಾಮ (40) ಮೃತಪಟ್ಟಿದ್ದನು. ಹೆಂಡತಿ ಚೈತ್ರಾ ಇದನ್ನು ಆತ್ಮಹತ್ಯೆ ಎಂದು ತಿಳಿಸಿದ್ದಳು. ಆದರೆ ಮೃತನ ಸಹೋದರ ದುರುಗಪ್ಪ ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸಿದರು.

ಮೊದಲು ಆತ್ಮಹತ್ಯೆ ಅಂದಿದ್ದ ಪತ್ನಿ
ಅಂದು ರಾತ್ರಿ ಮನೆಯಲ್ಲಿ ದಂಪತಿ ಊಟ ಮಾಡಿ ಮಲಗಿದ್ದರು. ದಂಪತಿ ಮಧ್ಯೆ ಕಲಹವಾಗಿದೆ. ಇದೇ ಕಾರಣಕ್ಕೆ ಪರಶುರಾಮನು ಕುಡುಗೋಲಿನಿಂದ ಹೊಟ್ಟೆಗೆ ಚುಚ್ಚಿಕೊಂಡಿದ್ದ ಎಂದು ಪರಶುರಾಮನ ಪತ್ನಿ ಚೈತ್ರಾ ತಿಳಿಸಿದ್ದಳು. ಹಾಗಾಗಿ ಆರಂಭದಲ್ಲಿ ಇದನ್ನು ಆತ್ಮಹತ್ಯೆ ಎಂದೆ ಎಲ್ಲರು ಭಾವಿಸಿದ್ದರು. ಆದರೆ ಪರಶುರಾಮನ ಸಹೋದರ ದುರುಗಪ್ಪ ಪ್ರಕರಣ ಸಂಬಂಧ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದರು.
ಮರು ವಿಚಾರಣೆ, ಅಸಲಿ ಸಂಗತಿ ಬಯಲು
ಮೇ 24ರಂದು ಪೊಲೀಸರು ಪರಶುರಾಮನ ಪತ್ನಿ ಚೈತ್ರಾಳನ್ನು ಪೊಲೀಸರು ಮರು ವಿಚಾರಣೆ ನಡೆಸಿದರು. ಈ ವೇಳೆ ಪರಶುರಾಮನದ್ದು ಆತ್ಮಹತ್ಯೆಯಲ್ಲ ಕೊಲೆ ಎಂದು ಆಕೆ ಬಾಯಿಬಿಟ್ಟಿದ್ದಾಳೆ. ಘಟನೆ ನಡೆದ ರಾತ್ರಿ ದಂಪತಿ ನಡುವೆ ಜಗಳ ನಡೆದಿತ್ತು. ಅದೇ ಸಮಯಕ್ಕೆ ಮಂಜನಾಥ ಅಲಿಯಾಸ್ ಟೀ ಪುಡಿ ಮಂಜು ಮನೆಗೆ ಬಂದಿದ್ದ. ಈ ವೇಳೆ ಪರಶುರಾಮ ಹಾಗೂ ಮಂಜು ನಡುವೆ ಜಗಳ ನಡೆದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪರಶುರಾಮನ ಕುಡುಗೋಲನ್ನು ಹಿಡಿದಿದ್ದ. ಆಗ ಮಂಜು ತನ್ನ ಕೈಯಲ್ಲಿದ್ದ ಚಾಕುವಿನಿಂದ ಪರಶುರಾಮನ ಹೊಟ್ಟೆಗೆ ಚುಚ್ಚಿದ್ದ. ಪರಶುರಾಮ ಜೋರಾಗಿ ಕೂಗಿಕೊಂಡು ಕುಸಿದ ಬಿದ್ದದ್ದರು. ಕೂಡಲೆ ಚೈತ್ರಾ, ಮಂಜುನಾಥನನ್ನು ಮನೆಯಿಂದ ಕಳುಹಿಸಿದ್ದಳು. ಪಕ್ಕದ ಮನೆಯವರ ಸಹಾಯದಿಂದ ಪರಶುರಾಮನನ್ನು ಸಾಗರದ ಆಸ್ಪತ್ರೆಗೆ ಸೇರಿಸಿದ್ದಳು. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಸರ್ಜಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಪರಶುರಾಮ ಕೊನೆಯುಸಿರೆಳೆದಿದ್ದರು. ಘಟನೆ ಸಂಬಂಧ ಮಂಜುನಾಥ ಮತ್ತು ಚೈತ್ರಾ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸಾಗರ ಪೊಲೀಸ್ ಠಾಣೆಯಲ್ಲಿ ತನಿಖೆ ಮುಂದುವರೆದಿದೆ.
