ಶುಭೋದಯ ಶಿವಮೊಗ್ಗ NEWS : ಸಾಗರ, ಸೊರಬ ಮತ್ತು ಶಿಕಾರಿಪುರ ತಾಲೂಕುಗಳಲ್ಲಿ ಏನೇನಾಯ್ತು? ಇಡೀ ದಿನದ ಸುದ್ದಿಯನ್ನು ಫಟಾಫಟ್ ಓದಲು ಶುಭೋದಯ ಶಿವಮೊಗ್ಗ NEWS.
ಕೆಎಸ್‌ಆರ್‌ಟಿಸಿ ಬಸ್ ಜಫ್ತಿ
ಸಾಗರ : ರಸ್ತೆ ಅಪಘಾತದಲ್ಲಿ ಮೃತಪಟ್ಟ ಪತ್ರಿಕಾ ವಿತರಕನ ಕುಟುಂಬಕ್ಕೆ ನ್ಯಾಯಾಲಯದ ಆದೇಶದ ಪ್ರಕಾರ ಪರಿಹಾರ ವಿತರಿಸದ ಕೆಎಸ್‌ಆರ್‌ಟಿಸಿ ಶಿರಸಿ ಡಿಪೊದ ಬಸ್ ಅನ್ನು ಜಪ್ತಿ ಮಾಡಲಾಗಿದೆ. 2022ರ ಜುಲೈ 7ರಂದು ಬೆಳಲಮಕ್ಕಿಯ ನಿವಾಸಿ ಗಣೇಶ ಪತ್ರಿಕೆ ಹಂಚಲು ಸೈಕಲ್‌ನಲ್ಲಿ ಹೋಗುತ್ತಿದ್ದಾಗ ಪ್ರವಾಸಿ ಮಂದಿರದ ಎದುರು ಕೆಎಸ್ಆರ್‌ಟಿಸಿ ಬಸ್ ಡಿಕ್ಕಿ ಹೊಡೆದಿತ್ತು. ಅವರು ಸ್ಥಳದಲ್ಲೇ ಮೃತಪಟ್ಟಿದ್ದರು.
ಕಾರ್ಗಲ್ : ಶ್ರೀ ಚೌಡೇಶ್ವರಿ ದೇವಸ್ಥಾನದ 27ನೇ ವರ್ಧಂತಿ ಉತ್ಸವ ನಡೆಯಿತು. ಪರ್ತಗಾಳಿ ಜೀವೋತ್ತಮ ಮಠಾಧೀಶ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿ ಆಶೀರ್ವಚನ ನೀಡಿದರು. ನಾವು ಮಾಡುವ ಕಾರ್ಯದಲ್ಲಿ ಅಚಲವಾದ ವಿಶ್ವಾಸ ಇರಿಸಿಕೊಂಡಾಗ ಮಾತ್ರ ಫಲ ಸಿಗಲು ಸಾಧ್ಯ ಎಂದರು. ಬಳಿಕ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಮೋಹನ್ ಎಂ.ಪೈ, ಶಿವಾನಂದ ಪ್ರಭು ಸೇರಿದಂತೆ ಹಲವರು ಇದ್ದರು.
ಅಮ್ಮನ ಆಸರೆ ವನ್ಯಜೀವಿ ಛಾಯಾಚಿತ್ರ ಪ್ರದರ್ಶನ
ಸಾಗರ : ಛಾಯಾಗ್ರಾಹಕ ಉಲ್ಲಾಸ್ ಶ್ಯಾನ ಭಾಗ್ ಅವರು ಸೆರೆ ಹಿಡಿದ ವನ್ಯಜೀವಿಗಳ ಛಾಯಾಚಿತ್ರ ಪ್ರದರ್ಶನ ‘ಅಮ್ಮನೆ ಆಸರೆ’ಯನ್ನು ಮಾ.21ರಿಂದ 23ರವರೆಗೆ ನಗರದ ಶಿವಗೋಪಾಲಕೃಷ್ಣ ದೇವಸ್ಥಾನದ ಸಭಾಂಗಣದಲ್ಲಿ ಪ್ರತಿ ಬೆಳಗ್ಗೆ 10ರಿಂದ ರಾತ್ರಿ 8ರ ವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಪವಿತ್ರ ಗ್ರೂಪ್ಸ್ ಮಾಲೀಕ ಎಂ.ನಾಗರಾಜ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೃತ ಕಾರ್ಮಿಕನ ಕುಟುಂಬಕ್ಕೆ ಪರಿಹಾರ
ಸಾಗರ : ಅಡಿಕೆ ಗಿಡದಿಂದ ಬಿದ್ದು ಮೃತಪಟ್ಟ ಮುಟುಗುಪ್ಪೆ ಗ್ರಾಮದ ಕೃಷಿ ಕಾರ್ಮಿಕ ಮಂಜುನಾಥ ಕುಟುಂಬಕ್ಕೆ ಮ್ಯಾಮ್ಕೋಸ್ ವತಿಯಿಂದ 6 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಲಾಯಿತು. ಮ್ಯಾಮ್ಕೋಸ್ ಉಪಾಧ್ಯಕ್ಷ ಎಚ್.ಎಸ್. ಮಹೇಶ್ ಹುಲ್ಕುಳಿ ಚೆಕ್ ವಿತರಿಸಿದರು. ಎಂ.ಎಲ್.ಹಳ್ಳಿಯ ಅನಂತಭಟ್ಟ ಅವರು ತೋಟದಲ್ಲಿ ಕೆಲಸ ಮಾಡುವಾಗ ಬಿದ್ದು ಗಾಯಗೊಂಡಿದ್ದು ಅವರ ಚಿಕಿತ್ಸೆಗೆ 1.50 ಲಕ್ಷ ರೂ. ಮೊತ್ತದ ಚೆಕ್ ವಿತರಿಸಲಾಯಿತು. ಮ್ಯಾಮ್ಕೋಸ್ ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ್ ಬರುವೆ ಸೇರಿ ಹಲವರು ಇದ್ದರು.
ಡೊಳ್ಳು ಕುಣಿತ ರಾಜ್ಯಮಟ್ಟದ ಸ್ಪರ್ಧೆ
ಆನಂದಪುರಂ : ದಾಸನಕೊಪ್ಪದಲ್ಲಿ ನಟ ಪುನೀತ್ ರಾಜ್‌ಕುಮಾರ್ ಜನ್ಮದಿನದ ಅಂಗವಾಗಿ ರಾಜ್ಯಮಟ್ಟದ ಹೊನಲು ಬೆಳಕಿನ ಮುಕ್ತ ಡೊಳ್ಳು ಕುಣಿತ ಸ್ಪರ್ಧೆ ಆಯೋಜಿಸಲಾಗಿತ್ತು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರತ್ನಾಕರ ಹೊನಗೋಡು ಸ್ಪರ್ಧೆಗೆ ಚಾಲನೆ ನೀಡಿದರು. ಡೊಳ್ಳು ಕುಣಿತ ಈಗೀಗ ಕ್ಷೀಣಿಸುತ್ತಿದೆ. ಯುವಕರು ಇದನು ರೂಢಿಸಿಕೊಳ್ಳುವುದು ತುರ್ತು ಅಗತ್ಯವಿದೆ ಎಂದು ತಿಳಿಸಿದರು.
ತಹಶೀಲ್ದಾರ್ ಹಸ್ತಕ್ಷೇಪ ವಿರೋಧಿಸಿ ಪ್ರತಿಭಟನೆ
ಶಿವಮೊಗ್ಗ : ಶಿಕಾರಿಪುರ ತಾಲ್ಲೂಕಿನ ತೊಗರ್ಸಿ ಮಳೆ ಹಿರೇಮಠದ ದಾಸೋಹ ವಿಚಾರದಲ್ಲಿ ತಹಶೀಲ್ದಾರ್ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿ ವೀರಶೈವ ಜಂಗಮ ಅರ್ಚಕ-ಪುರೋಹಿತ ಜೋತಿಷಿಗಳ ಜಿಲ್ಲಾ ಪರಿಷತ್ತಿನ ಪರವಾಗಿ ವೀರಶೈವ ಸಮಾಜದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕಂಪ್ಯೂಟರ್, ಪುಸ್ತಕ, ಕ್ರೀಡಾ ಸಾಮಗ್ರಿ ದೇಣಿಕೆ
ಶಿಕಾರಿಪುರ : ಎಲ್‌ಎಸ್‌ಇಜಿ, ಯೂತ್ ಫಾರ್ ಸೇವಾ ಸಂಸ್ಥೆಗಳು ಮಾರವಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕಂಪ್ಯೂಟರ್, ಪುಸ್ತಕ, ಕ್ರೀಡಾ ಸಾಮಗ್ರಿ ಸೇರಿದಂತೆ 8 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ದೇಣಿಗೆ ನೀಡಿವೆ. ಇವುಗಳನ್ನು ಯೂತ್ ಫಾರ್ ಸೇವಾದ ಮುಖ್ಯಸ್ಥ ಭಾಸ್ಕರ್ ವಿತರಣೆ ಮಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಾ, ಸದಸ್ಯರಾದ ಪ್ರಭಣ್ಣ, ಶರಣಪ್ಪ, ಪಿಡಿಒ ಪ್ರಭುನಾಯಕ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ರತ್ನಮ್ಮ ಸೇರಿ ಹಲವರು ಇದ್ದರು.
ಚುಂಚಾದ್ರಿ ಮಹಿಳಾ ವೇದಿಕೆಯಿಂದ ಮಹಿಳಾ ದಿನಾಚರಣೆ
ಸೊರಬ : ಮುರುಘಾ ಮಠದಲ್ಲಿ ತಾಲ್ಲೂಕು ಚುಂಚಾದ್ರಿ ಮಹಿಳಾ ವೇದಿಕೆ ವತಿಯಿಂದ 3ನೇ ವರ್ಷದ ಮಹಿಳಾ ದಿನಾಚರಣೆ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಸಹಾಯಕ ಪ್ರಾಧ್ಯಾಪಕಿ ಎಸ್.ಟಿ.ಪವಿತ್ರಾ, ಸಮಾಜದಲ್ಲಿ ಮಹಿಳೆಯರು ಸಬಲೀಕರಣಗೊಂಡಾಗ ಮಾತ್ರ ಶೋಷಣೆಯಿಂದ ಮುಕ್ತಿ ಹೊಂದಲು ಸಾಧ್ಯ ಎಂದರು. ತಾಲ್ಲೂಕು ಚುಂಚಾದ್ರಿ ಮಹಿಳಾ ವೇದಿಕೆ ಅಧ್ಯಕ್ಷೆ ರಾಧಾ ಉಮೇಶ್, ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಉಮಾಕಾಂತ ಗೌಡ ನೆಲ್ಲೂರು ಸೇರಿ ಹಲವರು ಭಾಗವಹಿಸಿದ್ದರು.
ಇದನ್ನೂ ಓದಿ » ವಿಧಾನಸೌಧದಲ್ಲಿ ಕೆಲಸ ಕೊಡಿಸ್ತೀನಿ ಅಂದ, ಲಕ್ಷ ಲಕ್ಷ ಹಣ ಪಡೆದವನ ಹಿನ್ನೆಲೆ ಪರಿಶೀಲಿಸಿದಾಗ ಕಾದಿತ್ತು ಆಘಾತ
Soraba, Sagara, Shikaripura News
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200