ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗದ ಲೈವ್.ಕಾಂ | SHIKARIPURA NEWS | 19 ಫೆಬ್ರವರಿ 2022
ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ನೂತನ ರೈಲ್ವೆ ಮಾರ್ಗ ನಿರ್ಮಾಣ ಯೋಜನೆಗೆ ಮೂರು ಎಕರೆ ಅಡಕೆ ತೋಟ ಭೂಸ್ವಾಧೀನಗೊಂಡಿದ್ದರಿಂದ ಮನನೊಂದ ರೈತ ತೋಟದಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಶಿಕಾರಿಪುರ ತಾಲೂಕಿನ ಹಾರೋಗೊಪ್ಪ ಗ್ರಾಮದ ಅರುಣ್ ನಾಯ್ಕ (35) ಆತ್ಮಹತ್ಯೆ ಮಾಡಿಕೊಂಡ ರೈತ. ಶಿವಮೊಗ್ಗ-ಶಿಕಾರಿಪುರ ರೈಲ್ವೆ ಮಾರ್ಗಕ್ಕೆ ಪ್ರಾಥಮಿಕ ಹಂತದ ಸರ್ವೇ ಕಾರ್ಯ ಮುಗಿದಿದ್ದು, ಜಮೀನು ಸ್ವಾಧೀನಪಡಿಸಿಕೊಂಡಿರುವ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಪರಿಹಾರ ವಿತರಣಾ ಕಾರ್ಯ ಕೈಗೊಂಡಿದೆ.
ತಾಲೂಕಿನ ಎಳೆನೀರುಕೊಪ್ಪ ಗ್ರಾಮದಲ್ಲಿ ತಂದೆ ತಿಮ್ಮಾನಾಯ್ಕ ಹೆಸರಿನಲ್ಲಿರುವ ಅರುಣ್ನಾಯ್ಕ್ಗೆ ಸೇರಿದ ಬೆಳೆದು ನಿಂತ ಮೂರು ಎಕರೆ ಅಡಕೆ ತೋಟ ರೈಲ್ವೆ ಕಾಮಗಾರಿಗೆ ಸ್ವಾಧೀನಪಡಿಸಿಕೊಳ್ಳಲಾಗಿದೆ. ಜಮೀನಿಗೆ ಎಕರೆಗೆ 5 ಲಕ್ಷ ರೂ. ನಿಗದಿಪಡಿಸಿ ನೋಟಿಸ್ ಜಾರಿ ಮಾಡಲಾಗಿತ್ತು.
ತೋಟ ಕಳೆದುಕೊಂಡ ರೈತ ಅರುಣ್ ನಾಯ್ಕ ರೈಲ್ವೆ ಕಾಮಗಾರಿ ಸ್ಥಳ ಪರಿಶೀಲನೆ ವೇಳೆ ಪ್ರತಿ ಎಕರೆಗೆ ಕಡಿಮೆ ಮೊತ್ತದ ಪರಿಹಾರ ನೀಡಲಾಗುತ್ತಿದೆ. ಇದರಿಂದ ರೈತರ ಬದುಕು ಬೀದಿಗೆ ಬೀಳಲಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು. ಆದರೆ ಅಧಿಕಾರಿಗಳು ಇದಕ್ಕೆ ಸ್ಪಂದಿಸಲಿಲ್ಲ ಎಂದು ಆಪಾದಿಸಲಾಗಿದೆ.
ಇದರಿಂದ ಮನನೊಂದು ತನ್ನದೇ ಅಡಕೆ ತೋಟದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ಅರುಣ್ ನಾಯ್ಕಗೆ ಪತ್ನಿ, ಪುತ್ರ, ಪುತ್ರಿ, ತಂದೆ-ತಾಯಿ, ತಮ್ಮ ಹಾಗೂ ಇಬ್ಬರು ಸಹೋದರಿಯರಿದ್ದಾರೆ. ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
» ಇದನ್ನೂ ಓದಿ | ‘ಈ ರೈಲ್ವೆ ಯೋಜನೆಗೆ ಕಲ್ಲು ಹಾಕುವ ಕೆಲಸ ಮಾಡಿದರೆ ಸುಮ್ಮನಿರಲ್ಲ’
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422