ಶಿರಾಳಕೊಪ್ಪ: ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಬರಗಾಲ ಹೆಚ್ಚಾಗಿದ್ದು, ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಒದ್ದಾಡುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ಪಟ್ಟಣದ ಸುತ್ತಮುತ್ತ ರಿಂಗ್ ರೋಡ್ ನಿರ್ಮಿಸಲು ಸರ್ಕಾರ ಹೊರಟಿರುವುದು ನಾಚಿಕೆಗೇಡಿನ ಸಂಗತಿ ಎಂದು ಸಂಸದ ಬಿ.ವೈ. ರಾಘವೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
ಶಿರಾಳಕೊಪ್ಪ ಪಟ್ಟಣದ ನಾಡ ಕಚೇರಿ ಎದುರು ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ಪ್ರಸ್ತಾವಿತ ರಿಂಗ್ ರೋಡ್ ಯೋಜನೆ ವಿರೋಧಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.

ಪಟ್ಟಣದ ಸುತ್ತಮುತ್ತ ರಿಂಗ್ ರೋಡ್ ಯೋಜನೆ ಜಾರಿಯಾದರೆ ರೈತರಿಗೆ ಸಾವಿರಾರು ಎಕರೆ ಜಮೀನು ಕಳೆದುಕೊಳ್ಳುವ ಭೀತಿ ಎದುರಾಗಿದೆ. ಸರ್ಕಾರ ಕೂಡಲೇ ಯೋಜನೆ ಕೈಬಿಡಬೇಕು ಎಂದರು.
ಗ್ಯಾರಂಟಿ ಯೋಜನೆಗಳ ಮೂಲಕ ಅಧಿಕಾರಕ್ಕೆ ಬಂದಿರುವ ಸರ್ಕಾರ, ಸೌಲಭ್ಯಗಳನ್ನು ನೀಡಲು ಮೀನಾಮೇಷ ಎಣಿಸುತ್ತಿದೆ. ಕಳೆದ ಮೂರು ತಿಂಗಳಿನಿಂದ ಗೃಹಲಕ್ಷ್ಮಿ ಹಣ ನೀಡಿಲ್ಲ.
– ಬಿ.ವೈ.ರಾಘವೇಂದ್ರ, ಸಂಸದ
ಶಾಸಕ ವಿಜಯೇಂದ್ರ ಅವರು ಈ ಯೋಜನೆ ಕೈ ಬಿಡಲು ಪತ್ರ ಬರೆದಿದ್ದಾರೆ. ರೈತರ ಜಮೀನು ಕಬಳಿಸಿ ರಿಯಲ್ ಎಸ್ಟೇಟ್ ದಂಧೆ ಉತ್ತೇಜಿಸಲು ಸರ್ಕಾರ ಹೊರಟಿದೆ. ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ಪುಕಟ್ಟಿ ವಿದ್ಯುತ್ ಎಂದು ಹೇಳಿ ಸ್ವಾಭಿಮಾನಿ ರೈತರಿಗೆ ಅವಮಾನ ಮಾಡಿದ್ದಾರೆ.
– ಕೆ.ಎಸ್.ಗುರುಮೂರ್ತಿ, ಎಂಎಡಿಬಿ ಮಾಜಿ ಅಧ್ಯಕ್ಷ
ರಿಂಗ್ ರೋಡ್ ಮಾಡಿದರೆ ಪರಿಹಾರ ಸಿಗುವುದಿಲ್ಲ, ಜನ ಸಂಪರ್ಕ ಕಡಿಮೆಯಾಗುತ್ತದೆ. ಸೊರಬದಲ್ಲಿ ರಿಂಗ್ ರೋಡ್ ಮಾಡದೆ ಶಿರಾಳಕೊಪ್ಪವನ್ನು ಏಕೆ ಆಯ್ಕೆ ಮಾಡಿದಿರಿ.
– ಯೋಗೇಶಪ್ಪ, ರೈತ ಮೋರ್ಚಾ ಅಧ್ಯಕ್ಷ
ಬಿಜೆಪಿ ತಾಲೂಕು ಅಧ್ಯಕ್ಷ ಹನುಮಂತಪ್ಪ ಸಂಕಲಾಪುರ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ನಿಂಬೆಗೊಂದಿ ಸಿದ್ದಲಿಂಗಯ್ಯ, ತಾಲೂಕು ಉಪಾಧ್ಯಕ್ಷ ಸತೀಶ್ ತಾಳಗುಂದ, ತಾ.ಪಂ. ಮಾಜಿ ಅಧ್ಯಕ್ಷ ಶಂಬು, ಕೊಳಗಿ ರೇವಣಪ್ಪ ಟೌನ್ ಅಧ್ಯಕ್ಷ ಚನ್ನವೀರ ಶೆಟ್ಟು ಮಾತನಾಡಿದರು. ಸಣ್ಣ ಹನುಮಂತಪ್ಪ, ನಿವೇದಿತಾ ರಾಜು, ಅಗಡಿ ಅಶೋಕ್, ಎಚ್.ಎಂ.ಚಂದ್ರಶೇಖರ್, ರವಿ ಮತ್ತಿತರರು ಹಾಜರಿದ್ದರು.