ಶಿಕಾರಿಪುರ: ತಾಲೂಕಿನಲ್ಲಿ ದೀಪಾವಳಿ ನಂತರ ಆಚರಿಸಲಾಗುವ ಹೋರಿ ಬೆದರಿಸುವ ಸ್ಪರ್ಧೆ ವೇಳೆ ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಮೃತಪಟ್ಟಿರುವ ಘಟನೆ ಇತ್ತೀಚೆಗೆ ನಡೆದಿದೆ. (ಈ ಸುದ್ದಿಯನ್ನು ಇನ್ನು 46 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)
ತಾಲೂಕಿನ ಕಲ್ಮನೆ ಗ್ರಾಮದಲ್ಲಿ ಗುರುವಾರ ನಡೆದ ಹೋರಿ ಹಬ್ಬದ ಸ್ಪರ್ಧೆಯನ್ನು ಮನೆ ಬಾಗಿಲಲ್ಲಿ ವೀಕ್ಷಣೆ ಮಾಡುತ್ತಿದ್ದ ಈರಪ್ಪ (84) ಮತ್ತು ಪಕ್ಕದ ಚುರ್ಚುಗುಂಡಿ ಗ್ರಾಮದ ಅರುಣ್ (48) ಅವರಿಗೆ ಓಡುತ್ತಿದ್ದ ಹೋರಿ ಮೈಮೇಲೆ ನುಗ್ಗಿದ ಪರಿಣಾಮ ತೀವ್ರ ಗಾಯಗೊಂಡು ಮೃತಪಟ್ಟಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಕೆರೆಗೆ ಬಿದ್ದ ಹೋರಿ ರಕ್ಷಿಸುವುದಕ್ಕೆ ತೆರಳಿದ್ದ ಯುವಕ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ದುರ್ಘಟನೆ ಹುಣಸೇಕೊಪ್ಪ ಗ್ರಾಮದ ಸಮೀಪ ಗುರುವಾರ ನಡೆದಿದೆ. ಅಶ್ರಫ್ (22) ಮೃತಪಟ್ಟ ಯುವಕ. ಹಿತ್ತಲ ಗ್ರಾಮದಲ್ಲಿ ಬುಧವಾರ ನಡೆದ ಸಾಂಪ್ರದಾಯಿಕ ಹೋರಿ ಬೆದರಿಸುವ ಹಬ್ಬಕ್ಕೆ ಅಶ್ರಫ್ ಆಗಮಿಸಿದ್ದರು. ಹೋರಿಯೊಂದು ವಾಪಸ್ ತೆರಳುವಾಗ ಕೆರೆಗೆ ಬಿದ್ದಿದ್ದು, ಹೊರ ಬರಲಾಗದೇ ಒದ್ದಾಡುತ್ತಿತ್ತು.
ಹೋರಿಯನ್ನು ರಕ್ಷಿಸುವುದಕ್ಕೆ ನೀರಿಗಿಳಿದಾಗ ಅಶ್ರಫ್ ತಾನೂ ಕೆಸರಲ್ಲಿ ಸಿಲುಕಿ ಅಲ್ಲಿಯೇ ಮೃತಪಟ್ಟಿದ್ದಾರೆ. ಆತನ ಜತೆ ಆಗಮಿಸಿದ್ದ ಯುವಕರು ಸೇರಿದಂತೆ ಹಲವರು ತಕ್ಷಣ ಆಗಮಿಸಿ ರಕ್ಷಣೆಗೆ ಮುಂದಾದರೂ ಪ್ರಯೋಜನವಾಗಿಲ್ಲ.ಪಟ್ಟಣದಲ್ಲಿ ಬುಧವಾರ ನಡೆದ ಹೋರಿ ಹಬ್ಬದಲ್ಲಿ ಹೋರಿಯೊಂದು ಓಡುವಾಗ ಬಿದ್ದು ಕಾಲು ಮುರಿದುಕೊಂಡಿದೆ.