ಬಳ್ಳಿಗಾವಿಯಲ್ಲಿ ವಿಜಯೇಂದ್ರ ಗ್ರಾಮ ವಾಸ್ತವ್ಯ, ಗ್ರಾಮಸ್ಥರ ಜೊತೆಗೆ ಸಂವಾದ, ವಾಕಿಂಗ್‌

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

NEWS HIGHLIGHTS

ಶಿಕಾರಿಪುರ: ತಾಲೂಕಿನ ಬಳ್ಳಿಗಾವಿ ಗ್ರಾಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ಬೂತ್‌ ಮಟ್ಟದ ಗ್ರಾಮ ವಾಸ್ತವ್ಯ ಮಾಡಿದರು. ಇದಕ್ಕೂ ಮುನ್ನ ಜಾವಗಟ್ಟೆ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಎಸ್‌ಸಿ, ಎಸ್‌ಟಿ) ಮುಖಂಡರ ಸಭೆ ಹಾಗೂ ಸಂಜೀವಿನಿ ಒಕ್ಕೂಟದ ಸ್ವಸಹಾಯ ಸಂಘಗಳ ಮಹಿಳೆಯರೊಂದಿಗೆ ಸಂವಾದ ನಡೆಸಿದರು.

➤ ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.

ಎಸ್‌ಸಿ, ಎಸ್‌ಟಿ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ಸರ್ಕಾರದ ಅವಧಿಯಲ್ಲಿ ದಲಿತ ಸಮುದಾಯದ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣಕ್ಕೆ ಬದ್ಧತೆಯಿಂದ ಕೆಲಸ ಮಾಡಲಾಗಿದೆ. ಜಾರಿಗೊಳಿಸಲಾದ ವಿವಿಧ ಕಲ್ಯಾಣ ಯೋಜನೆಗಳು ಇದಕ್ಕೆ ಸಾಕ್ಷಿ. ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ಈ ಸಮುದಾಯಗಳ ಅಭಿವೃದ್ಧಿಗೆ ಇನ್ನಷ್ಟು ವಿಶೇಷ ಯೋಜನೆಗಳನ್ನು ಜಾರಿಗೆ ತರಲಾಗುವುದು’ ಎಂದರು.

BY-Vijayendra-Grama-Vastavya-at-Balligavi-in-Shikaripura-taluk

ಮಹಿಳೆಯರ ಅಹವಾಲು ಸ್ವೀಕಾರ

ಗ್ರಾಮ ವಾಸ್ತವ್ಯದ ಅಂಗವಾಗಿ ಸಂಜೀವಿನಿ ಒಕ್ಕೂಟದ ಮಹಿಳೆಯರೊಂದಿಗೆ ಹಮ್ಮಿಕೊಂಡಿದ್ದ ಸಂವಾದದಲ್ಲಿ ಸಾರ್ವಜನಿಕರು ಗ್ರಾಮೀಣ ಭಾಗಕ್ಕೆ ಬಸ್ ಸೌಲಭ್ಯ, ಹಾಲಿನ ಖರೀದಿ ದರ ಹೆಚ್ಚಳ, ವಿದ್ಯಾರ್ಥಿವೇತನ ಹಾಗೂ ಮಹಿಳಾ ಸಬಲೀಕರಣದ ಕುರಿತು ಶಾಸಕರಿಗೆ ಅಹವಾಲು ಸಲ್ಲಿಸಿದರು.

ಮನವಿ ಆಲಿಸಿದ ವಿಜಯೇಂದ್ರ, ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಬಿಜೆಪಿ ಸರ್ಕಾರ ನೀಡಿದ ಆದ್ಯತೆಯನ್ನು ಸ್ಮರಿಸಿದರು. ಸಾರ್ವಜನಿಕರ ನಿರೀಕ್ಷೆಗೆ ತಕ್ಕಂತೆ ಸ್ಥಳೀಯ ಸಮಸ್ಯೆಗಳಿಗೆ ಶೀಘ್ರದಲ್ಲೇ ಸ್ಪಂದಿಸುವುದಾಗಿ ಭರವಸೆ ನೀಡಿದರು.

ಬಳ್ಳಿಗಾವಿಯಲ್ಲಿ ಗ್ರಾಮ ವಾಸ್ತವ್ಯ

ಸೋಮವಾರ ರಾತ್ರಿ ತೊಗರ್ಸಿ ಮಹಾಶಕ್ತಿ ಕೇಂದ್ರದ ವ್ಯಾಪ್ತಿಯ ಐತಿಹಾಸಿಕ ಬಳ್ಳಿಗಾವಿ ಗ್ರಾಮದ ಮಲ್ಲೇಶ್‌ ಎಂಬುವವರ ಮನೆಯಲ್ಲಿ ಬಿ.ವೈ. ವಿಜಯೇಂದ್ರ ಗ್ರಾಮ ವಾಸ್ತವ್ಯ ಮಾಡಿದರು.ಮಂಗಳವಾರ ಬೆಳಗ್ಗೆ ಬಳ್ಳಿಗಾವಿ ಗ್ರಾಮದಿಂದ ಮಾಳಗುಂಡನಕೊಪ್ಪ ಗ್ರಾಮದವರೆಗೆ ವಿಜಯೇಂದ್ರ ವಾಯುವಿಹಾರ ನಡೆಸಿದರು.

ಮಾರ್ಗಮಧ್ಯೆ ಗ್ರಾಮದ ಹಿರಿಯರು, ಯುವಕರು ಹಾಗೂ ರೈತರೊಂದಿಗೆ ಕುಶಲೋಪರಿ ವಿಚಾರಿಸಿ, ಹಳ್ಳಿಯ ಮೂಲಸೌಕರ್ಯಗಳ ಬಗ್ಗೆ ಮಾಹಿತಿ ಪಡೆದರು. ಸಭೆಗಳಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಹನುಮಂತಪ್ಪ ಸಂಕ್ಲಾಪುರ, ಎಸ್‌ಸಿ ಮೋರ್ಚಾ ಅಧ್ಯಕ್ಷ ಈಶ್ವರಪ್ಪ ಜಾವಗಟ್ಟೆ, ಮುಖಂಡರಾದ ಕೆ.ಎಸ್. ಗುರುಮೂರ್ತಿ, ಕೊಳಗಿ ರೇವಣಪ್ಪ, ಕವುಲಿ ಸುಬ್ಬಣ್ಣ, ಆನಂದ ತಾಳಗುಂದ, ಬಿಳ್ಕಿ ದಿನೇಶ್, ರಾಜೇಶ್ವರಿ ಮಹೇಶ್, ಅಶೋಕ್ ಮಾರವಳ್ಳಿ, ಬಂಗಾರಿ ನಾಯಕ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.