SHIVAMOGGA LIVE NEWS | 26 FEBRURARY 2023
SHIMOGA : ವಿಮಾನ ನಿಲ್ದಾಣ ಉದ್ಘಾಟನಾ ಸಮಾರಂಭದ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ. ದೊಡ್ಡ ಸಂಖ್ಯೆಯಲ್ಲಿ ಜನರು ಸೇರುವ ಹಿನ್ನೆಲೆ ಏರ್ ಪೋರ್ಟ್ ಆವರಣದಲ್ಲಿ ಬೃಹತ್ ಪೆಂಡಾಲ್ (Pendal) ನಿರ್ಮಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿ ಅನೇಕ ಗಣ್ಯರು ಭಾಗವಹಿಸುತ್ತಿರುವ ಹಿನ್ನೆಲೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಪೆಂಡಾಲ್ ರೆಡಿ
ವಿಮಾನ ನಿಲ್ದಾಣದ ಆವರಣದಲ್ಲಿ ಬೃಹತ್ ಪೆಂಡಾಲ್ (Pendal) ನಿರ್ಮಿಸಲಾಗಿದೆ. ಸುಮಾರು ಒಂದು ಲಕ್ಷ ಜನರು ಕೂರಲು ಕುರ್ಚಿಗಳನ್ನು ಹಾಕಲಾಗಿದೆ. ವಿಮಾನ ನಿಲ್ದಾಣದ ಗೇಟ್ ಒಳಗೆ ಪ್ರವೇಶ ಪಡೆಯುತ್ತಿದ್ದಂತೆ ಬಲ ಭಾಗದಲ್ಲಿ ಕಾರ್ಯಕ್ರಮದ ಸ್ಥಳವಿದೆ.
ಕಾರ್ಯಕ್ರಮಕ್ಕೆ ಬರುವ ಪ್ರತಿಯೊಬ್ಬರನ್ನು ತಪಾಸಣೆ ಮಾಡಿ ಒಳಗೆ ಬಿಡಲಾಗುತ್ತದೆ. ಇದಕ್ಕಾಗಿ ಮೆಟಲ್ ಡಿಟೆಕ್ಟರ್ ಗಳನ್ನು ಅಳವಡಿಸಾಗಿದೆ. ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕವಾಗಿ ವ್ಯವಸ್ಥೆ ಕಲ್ಪಿಸಲಾಗಿದೆ.
ಊಟು, ತಿಂಡಿಗೆ ವ್ಯವಸ್ಥೆ
ಕಾರ್ಯಕ್ರಮಕ್ಕೆ ಬರುವ ದೊಡ್ಡ ಸಂಖ್ಯೆಯ ಜನರಿಗೆ ಊಟ, ತಿಂಡಿಗೆ ವಿಮಾನ ನಿಲ್ದಾಣದ ಆವರಣದ ಹೊರಗೆ ವ್ಯವಸ್ಥೆ ಮಾಡಲಾಗಿದೆ. ವಿಮಾನ ನಿಲ್ದಾಣದ ಗೇಟ್ ಮುಂಭಾಗ ಮತ್ತು ಮಂಡೇನಕೊಪ್ಪ ಬಳಿ ತೋಟವೊಂದರಲ್ಲಿ ಬೃಹತ ಪೆಂಡಾಲ್ ಹಾಕಲಾಗಿದೆ.
ಪಾರ್ಕಿಂಗ್ ಸ್ಥಳ ನಿಯೋಜನೆ
ಶಿವಮೊಗ್ಗೆ ಮತ್ತು ಲಕ್ಕಿನಕೊಪ್ಪ ಕಡೆಯಿಂದ ಬರುವ ವಾಹನಗಳಿಗೆ ಪ್ರತ್ಯೇಕವಾಗಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಬಸ್ಸುಗಳು, ಕಾರುಗಳು ಮತ್ತು ಇತರೆ ವಾಹನಗಳಿಗೆ ಸ್ಥಳವಾಕಾಶ ಕಲ್ಪಿಸಲಾಗಿದೆ. ರಸ್ತೆ ಪಕ್ಕದ ತೋಟಗಳು, ಖಾಲಿ ಜಾಗಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಇದೆ.
ಬಿಗಿ ಭದ್ರತೆ
ಪ್ರಧಾನಿ ನರೇಂದ್ರ ಮೋದಿ ಸೇರಿ ಗಣ್ಯಾತಿಗಣ್ಯರು ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಹಿನ್ನೆಲೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಜಿಲ್ಲೆ ಮತ್ತು ಹೊರ ಜಿಲ್ಲೆಗಳಿಂದ ಪೊಲೀಸರು ಆಗಮಿಸಿದ್ದಾರೆ. ಇನ್ನು, ಬಾಂಬ್ ಸ್ಕ್ವಾಡ್, ಪ್ರಧಾನಿ ರಕ್ಷಣೆಯ ಜವಾಬ್ದಾರಿ ಹೊತ್ತಿರುವ ಎಸ್.ಪಿ.ಜಿ ತಂಡ ಪ್ರತ್ಯೇಕವಾಗಿ ಭದ್ರತೆ ವಹಿಸಿಕೊಂಡಿವೆ.
ಇದನ್ನೂ ಓದಿ – ವಿಮಾನ ನಿಲ್ದಾಣ ಉದ್ಘಾಟನೆ ಹಿನ್ನೆಲೆ, ನೆಮ್ಮದಿಯ ನಿಟ್ಟುಸಿರು ಬಿಟ್ಟ ವಾಹನ ಸವಾರರು, ಕಾರಣವೇನು?