ಶಿವಮೊಗ್ಗ: ಕಸ್ತೂರಿ ರಂಗನ್ ವರದಿ ಯಥಾವತ್ತು ಜಾರಿ ವಿರೋಧಿಸಿ ಶಿವಮೊಗ್ಗ ತಾಲೂಕು ಗಾಜನೂರು ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯಲ್ಲಿ ಗಾಜನೂರು ಮಹಾಶಕ್ತಿ ಕೇಂದ್ರದ ಕಾರ್ಯಕರ್ತರು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಹರಿಕೃಷ್ಣ ನೇತೃತ್ವದಲ್ಲಿ ಪಾದಯಾತ್ರೆ ನಡೆಸಿದರು.
ಗಾಜನೂರು ಜಲಾಶಯ ಸಮೀಪದ ಹಾಲಲಕ್ಕವಳ್ಳಿ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ಹಸುವಿಗೆ ಪೂಜೆ ಸಲ್ಲಿಸುವ ಮೂಲಕ ಪಾದಯಾತ್ರೆ ಮತ್ತು ಜನಜಾಗೃತಿ ಸಭೆಗೆ ಚಾಲನೆ ನೀಡಿದರು. ಹಾಲಲಕ್ಕವಳ್ಳಿ, ಕಡೇಕಲ್, ಕುಸ್ಕೂರು, ಯರಗನಾಳ್ ಮಾರ್ಗವಾಗಿ ಲಕ್ಕಿನಕೊಪ್ಪ ಸರ್ಕಲ್ ವರೆಗೆ ಪಾದಯಾತ್ರೆ ನಡೆಸಲಾಯಿತು.

ಪ್ರತಿ ಊರಿನಲ್ಲೂ ಜನಜಾಗೃತಿ
ಪ್ರತಿ ಊರಿನಲ್ಲೂ ಜನಜಾಗೃತಿ ಸಭೆಗಳನ್ನು ನಡೆಸಿ ಕಸ್ತೂರಿ ರಂಗನ್ ವರದಿಯಲ್ಲಿ ಸೇರಿರುವ ಅರಣ್ಯದಂಚಿನ ಗ್ರಾಮಗಳನ್ನು ಬಿಡುಗಡೆಗೊಳಿಸಬೇಕು. 7ನೇ ಅಧಿಸೂಚನೆ ಅನುಷ್ಠಾನವಾದಲ್ಲಿ ಅರಣ್ಯ ಮತ್ತು ಅರಣ್ಯದಂಚಿನ ಗ್ರಾಮಗಳು, ಜನರಿಗೆ ಮರಣ ಶಾಸನವಾಗುತ್ತದೆ. ಹೀಗಾಗಿ ಕಸ್ತೂರಿ ರಂಗ್ ವರದಿ ಪರಿಷ್ಕರಣೆ ಮಾಡಿ ರಾಜ್ಯ ಸರ್ಕಾರಕ್ಕೆ ರವಾನಿಸಬೇಕು ಎಂದು ತಿಳಿಸಲಾಯಿತು.
ಎರಡನೇ ದಿನದ ಪಾದಯಾತ್ರೆ ಆರಂಭ
ಶುಕ್ರವಾರ ಬೆಳಿಗ್ಗೆ ತೋಟದಕೆರೆಯಿಂದ ಪಾದಯಾತ್ರೆ ಆರಂಭವಾಗಲಿದೆ. ಗಣೇದಾಳು ಮೂಲಕ ಉಂಬ್ಳೆಬೈಲಿಗೆ ತಲುಪಿ ಬಹಿರಂಗ ಸಭೆ ಜರುಗಲಿದೆ. ಬಳಿಕ ಸಾರಿಗೆರೆ, ಕೈದೊಟ್ಲು, ಸಿದ್ದಮ್ಮಾಜಿ ಹೊಸೂರು, ಲಿಂಗಾಪುರ ಮಾರ್ಗವಾಗಿ ಕಾಕನಹಸೂಡಿಗೆ ತಲುಪಿ ಅಲ್ಲಿಯೂ ಬಹಿರಂಗ ಸಭೆ ಆಯೋಜಿಸಲಾಗಿದೆ.
ಪಾದಯಾತ್ರೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಸಿದ್ದರಾಮಣ್ಣ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಸಿದ್ದಲಿಂಗಪ್ಪ, ಜಿಲ್ಲಾ ಉಪಾಧ್ಯಕ್ಷೆ ಪದ್ಮಿನಿ ರಾವ್, ಕಾರ್ಯದರ್ಶಿ ಶಾಂತಾ ಸುರೇಂದ್ರ, ತೀರ್ಥಹಳ್ಳಿ ಮಂಡಲದ ಅಧ್ಯಕ್ಷ ನವೀನ್ ಹೆದ್ದೂರು, ಗಾಜನೂರು ಮಹಾಶಕ್ತಿ ಕೇಂದ್ರ ಅಧ್ಯಕ್ಷ ಕುಮಾರ್, ಮುಖಂಡರಾದ ಶಿವನಂಜಪ್ಪ, ಕುಪೇಂದ್ರ ಮತ್ತಿತರರು ಭಾಗವಹಿಸಿದ್ದರು.