ಸಕ್ರೆಬೈಲು ಬಿಡಾರದ ಆನೆಗಳಿಗೆ ಶಿವಮೊಗ್ಗ ದಸರಾಗೆ ಆಹ್ವಾನ

ಶಿವಮೊಗ್ಗ: ದಸರಾ ಮಹೋತ್ಸವದ ಜಂಬೂಸವಾರಿಗೆ ಗಜಪಡೆ ಸಜ್ಜಾಗುತ್ತಿದ್ದು, ಸಕ್ರೆಬೈಲು ಆನೆ ಬಿಡಾರದಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ ಆನೆಗಳಿಗೆ ವಿಶೇಷ ಪೂಜೆ ಸಲ್ಲಿಸಿ ಅದ್ಧೂರಿಯಾಗಿ ಸ್ವಾಗತಿಸಿದರು.

ದಸರಾ ಮೆರವಣಿಗೆಯಲ್ಲಿ ತಾಯಿ ಶ್ರೀ ಚಾಮುಂಡೇಶ್ವರಿಯ ಮೂರ್ತಿಯ ಅಂಬಾರಿ ಹೊರಲಿರುವ ಆನೆಗಳು ಸೇರಿದಂತೆ ಗಜಪಡೆಗೆ ಹಣ್ಣು-ಹಂಪಲು ನೀಡಿ ಪೂಜಿಸಲಾಯಿತು. ದಸರಾ ಜಂಬೂಸವಾರಿಗೆ ಸಕ್ರೆಬೈಲು ಆನೆ ಬಿಡಾರದ ಗಜಪಡೆಯೇ ಪ್ರಮುಖ ಆಕರ್ಷಣೆ. ಯಾವುದೇ ಲೋಪವಿಲ್ಲದೆ ಉತ್ಸವ ವೈಭವ ಹಾಗೂ ಶಿಸ್ತುಬದ್ಧವಾಗಿ ನೆರವೇರಲು ದೇವರಲ್ಲಿ ಪ್ರಾರ್ಥಿಸಲಾಗಿದೆ ಎಂದು ಶಾಸಕರು ತಿಳಿಸಿದರು.

sakrebyle-elephant-welcomed-for-Shivamogga-dasara

ಇದೇ ವೇಳೆ ಆನೆಗಳ ಆರೋಗ್ಯ ತಪಾಸಣೆ, ಪೌಷ್ಟಿಕ ಆಹಾರ ಪೂರೈಕೆ ಹಾಗೂ ನಗರದಲ್ಲಿ ನಡೆಯಲಿರುವ ತಾಲೀಮಿನ ಕುರಿತು ಅಧಿಕಾರಿಗಳು ಮತ್ತು ಮಾವುತರೊಂದಿಗೆ ಚರ್ಚಿಸಲಾಯಿತು. ನಗರದ ಸಮಸ್ತ ಜನತೆ ಈ ಸಾಂಸ್ಕೃತಿಕ ಮಹೋತ್ಸವದಲ್ಲಿ ಸಂಭ್ರಮದಿಂದ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಶಾಸಕರು ಮನವಿ ಮಾಡಿದರು.

ಈ ಸಂದರ್ಭ ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ, ವನ್ಯಜೀವಿ ವಿಭಾಗದ ಡಿಎಫ್‌ಒ ಪ್ರಸನ್ನಕೃಷ್ಣ ಪಟಗಾರ್, ಬಿಜೆಪಿ ಜಿಲ್ಲಾ ಅಧ್ಯಕ್ಷ ಜಗದೀಶ್, ಉಪಾಧ್ಯಕ್ಷ ಜ್ಞಾನೇಶ್ವರ್, ನಾಗರಾಜ್, ನಗರ ಅಧ್ಯಕ್ಷ ಮೋಹನ್ ರೆಡ್ಡಿ, ಮಹಾನಗರ ಪಾಲಿಕೆ ಮಾಜಿ ಸದಸ್ಯರು, ಪಾಲಿಕೆ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.