ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 10 FEBRUARY 2021
ಮೂರು ವರ್ಷಕ್ಕೊಮ್ಮೆ ಗ್ರಾಮಸ್ಥರೆಲ್ಲ ಊರು ಬಿಡ್ತಾರೆ. ಇಡೀ ಗ್ರಾಮಕ್ಕೆ ಬೇಲಿ ಹಾಕ್ತಾರೆ. ದನಕರು, ನಾಯಿ, ಕೋಳಿಗಳನ್ನು ಕೂಡ ಊರಲ್ಲಿ ಬಿಡದೆ ತಮ್ಮೊಂದಿಗೆ ಕರೆದೊಯ್ಯುತ್ತಾರೆ.
ಇದು ಹೊರಬೀಡು ಜಾತ್ರೆಯ ವಿಶೇಷ. ಶಿವಮೊಗ್ಗ ತಾಲೂಕು ಮಂಡಘಟ್ಟ ಗ್ರಾಮದಲ್ಲಿ ಈ ಜಾತ್ರೆ ನಡೆಯಲಿದೆ. ಗ್ರಾಮಸ್ಥರೆಲ್ಲ ಊರಾಚೆಗೆ ಇದ್ದು ಒಟ್ಟಿಗೆ ಬೆರೆತು, ಊಟ, ತಿಂಡಿ ಮಾಡಿ ಸಾಮಾರಸ್ಯದಿಂದ ಹಬ್ಬ ಆಚರಿಸುತ್ತಾರೆ. ಮಂಗಳವಾರ ಹೊರಬೀಡು ಜಾತ್ರೆ ನಡೆಯಿತು.
ಹೇಗಿರುತ್ತೆ ಹೊರಬೀಡು ಜಾತ್ರೆ ಆಚರಣೆ?
ಮಂಡಘಟ್ಟ ಗ್ರಾಮದಲ್ಲಿ ಮೂರು ವರ್ಷಕ್ಕೊಮ್ಮೆ ಹೊರಬೀಡು ಆಚರಣೆ ನಡೆಯುತ್ತದೆ. ಈ ಜಾತ್ರೋತ್ಸವದಂದು ಸೂರ್ಯದಯಕ್ಕೆ ಮೊದಲು ಎಲ್ಲರೂ ಊರು ಬಿಡುತ್ತಾರೆ. ಆ ಸಂದರ್ಭದಲ್ಲಿ ಯಾವುದೆ ಜೀವಿಯೂ ಊರಿನಲ್ಲಿ ಇರಬಾರದು ಅನ್ನುವ ಕಾರಣಕ್ಕೆ, ದನಕರು, ನಾಯಿ, ಕೋಳಿಗಳನ್ನು ಕೂಡ ತಮ್ಮೊಂದಿಗೆ ಕರೆದೊಯ್ಯುತ್ತಾರೆ. ಇಡೀ ದಿನ ಊರಿನಿಂದ ಹೊರಗಿರುತ್ತಾರೆ. ಯಾರೊಬ್ಬರೂ ಊರೊಳಗೆ ಕಾಲಿಡಬಾರದು ಎಂಬ ಕಾರಣಕ್ಕೆ ಇಡೀ ಊರಿಗೆ ಬೇಲಿ ಹಾಕುತ್ತಾರೆ. ಗಾಡಿಗಳನ್ನು ಅಡ್ಡ ನಿಲ್ಲಿಸಿ ರಸ್ತೆಗಳನ್ನು ಬಂದ್ ಮಾಡುತ್ತಾರೆ. ಸೂರ್ಯ ಮುಳುಗಿದ ಬಳಿಕ ಊರೊಳಗೆ ಕಾಲಿಡುತ್ತಾರೆ.
ಇಡೀ ದಿನ ಎಲ್ಲಿರ್ತಾರೆ ಜನರು?
ಹೊರಬೀಡು ಆಚರಣೆ ಹಿನ್ನೆಲೆ ಜನರು ಊರ ಹೊರಗೆ ಗದ್ದೆ ಬಯಲಿನಲ್ಲಿ ಟೆಂಟ್, ಗುಡಿಸಲುಗಳನ್ನು ನಿರ್ಮಿಸುತ್ತಾರೆ. ಇಡೀ ದಿನ ಜನರು ಅಲ್ಲಿಯೇ ಉಳಿದುಕೊಳ್ಳುತ್ತಾರೆ.
‘ಈ ಹಿಂದೆ ಕಾಯಿಲೆಗಳು ಬಂದಾಗ ಪೂರ್ವಿಕರು ಊರು ತೊರೆದು ಕಾಡಿನಲ್ಲಿ ದಿನ ಕಳೆಯುತ್ತಿದ್ದರು. ಆ ಆಚರಣೆಯೇ ಹೊರಬೀಡು ಆಚರಣೆಯಾಗಿದೆ. ಈ ಉತ್ಸವ ಮಾಡುವುದರಿಂದ ದೇವಿಯು ಜನರಿಗೆ ಒಳ್ಳೆಯ ಆರೋಗ್ಯ ಕೊಡುತ್ತಾಳೆ, ಎಲ್ಲರನ್ನೂ ರಕ್ಷಣೆ ಮಾಡುತ್ತಾಳೆ ಎಂಬ ನಂಬಿಕೆ ಇದೆ. ಹೊರಬೀಡು ಆಚರಣೆ ವೇಳೆ ದೇವಿಯ ಮೂರ್ತಿ ಸಿದ್ಧಪಡಿಸಿ ಪೂಜೆ ಸಲ್ಲಿಸುತ್ತೇವೆ’ ಅನ್ನುತ್ತಾರೆ ಗ್ರಾಮದ ಹಿರಿಯ ನಂಜಪ್ಪ ಗೌಡ.
ಮೂರ್ತಿ ತಯಾರಿಸಿ ವಿಶೇಷ ಪೂಜೆ
ಗದ್ದೆ ಬಯಲಿನಲ್ಲಿ ಉಳಿದ ವೇಳೆ ಗ್ರಾಮ ದೇವಿಯ ಮಣ್ಣಿನ ಮೂರ್ತಿಯನ್ನು ಸಿದ್ಧಪಡಿಲಸಾಗುತ್ತದೆ. ಸಂಜೆ ವೇಳೆಗೆ ಆ ಮೂರ್ತಿಗೆ ಪೂಜೆ ಸಲ್ಲಿಸಲಾಗುತ್ತದೆ. ಗ್ರಾಮಸ್ಥರೆಲ್ಲ ಒಟ್ಟಿಗೆ ಸೇರಿ ವಿಶೇಷ ಪೂಜೆ ನೆರವೇರಿಸಿದ ಬಳಿಕ, ಗ್ರಾಮವನ್ನು ಪ್ರವೇಶಿಸುತ್ತಾರೆ.
ಹೊರಬೀಡು ಜಾತ್ರೋತ್ಸವದ ವೇಳೆ ಗ್ರಾಮಸ್ಥರೆಲ್ಲ ಒಟ್ಟಿಗೆ ಬೆರೆತು, ಊಟ ಮಾಡಿ, ಸೌಹಾರ್ದತೆಯನ್ನು ಪ್ರದರ್ಶಿಸುತ್ತಾರೆ. ಗ್ರಾಮದಲ್ಲಿ ಶಾಂತಿ ನೆಲೆಸಲು ಇದು ಕಾರಣವಾಗುತ್ತದೆ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422