ಹಾರನಹಳ್ಳಿ ಬಳಿ ಇಂಡಿಕೇಟರ್‌ ಹಾಕದೆ ಬೈಕ್‌ ತಿರುಗಿಸಿದ ಯುವಕರು, ಅಪಘಾತದಲ್ಲಿ ಪ್ರಜ್ಞಾಹೀನ ಸ್ಥಿತಿಗೆ ವ್ಯಕ್ತಿ

ಶಿವಮೊಗ್ಗ ಲೈವ್.ಕಾಂ | ಆಯನೂರು

ಹಾರನಹಳ್ಳಿ ಗ್ರಾಮದ ಹನುಮಂತ ಹೋಟೆಲ್ ಎದುರು ಸಂಭವಿಸಿದ ಅಪಘಾತದಲ್ಲಿ ಬೈಕ್‌ ಸವಾರರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮತ್ತೊಂದು ಬೈಕ್‌ನ ಸವಾರರು ಇಂಡಿಕೇಟರ್‌ ಹಾಕದೆ ದಿಢೀರನೆ ಬಲಕ್ಕೆ ತಿರುಗಿಸಿದ್ದೇ ಘಟನೆಗೆ ಕಾರಣ ಎಂದು ಆರೋಪಿಸಲಾಗಿದೆ.

Kumsi-Police-Station-Shimoga

ವಿಠಗೊಂಡನಕೊಪ್ಪ ಗ್ರಾಮದ ಎನ್.ಕೆ.ಸುರೇಶ ಎಂಬುವವರು ಹಾರನಹಳ್ಳಿಯ ಬಂಕ್‌ನಲ್ಲಿ ಪೆಟ್ರೋಲ್‌ ಹಾಕಿಸಿಕೊಂಡು ಬೈಕ್‌ನಲ್ಲಿ ಬಸ್‌ ನಿಲ್ದಾಣದ ಕಡೆಗೆ ತೆರಳುತ್ತಿದ್ದರು. ಇದೇ ವೇಳೆ ಮೂವರು ಯುವಕರು ಒಂದೇ ಬೈಕಿನಲ್ಲಿ ವೇಗವಾಗಿ ಬಂದಿದ್ದು, ಇಂಡಿಕೇಟರ್ ಹಾಕದೆ ಏಕಾಏಕಿ ಬಲಕ್ಕೆ ತಿರುಗಿಸಿದ್ದಾರೆ. ಹಿಂದಿನಿಂದ ಬರುತ್ತಿದ್ದ ಎನ್.ಕೆ. ಸುರೇಶ ಅವರ ಬೈಕ್‌ ಯುವಕರಿದ್ದ ಬೈಕ್‌ಗೆ ಡಿಕ್ಕಿಯಾಗಿದೆ ಎಂದು ಆರೋಪಿಸಲಾಗಿದೆ.

ಅಪಘಾತದಲ್ಲಿ ಗಾಯಗೊಂಡಿದ್ದ ಸುರೇಶ್‌ ಅವರನ್ನು ತಕ್ಷಣವೇ ಆಯನೂರಿನ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಸರ್ಜಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಸ್ಪತ್ರೆಗೆ ದಾಖಲಾದ ವೇಳೆ ಸುರೇಶ್‌ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.