ಬೆಂಗಳೂರು: ಶಿವಮೊಗ್ಗ ವಿಮಾನ ನಿಲ್ದಾಣವನ್ನು ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡಲು ಬಿಡುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ. (ಈ ಸುದ್ದಿಯನ್ನು ಇನ್ನು 57 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)
ಶಿವಮೊಗ್ಗ ವಿಮಾನ ನಿಲ್ದಾಣವನ್ನು ರಾಜ್ಯ ಸರ್ಕಾರ ಸ್ಥಗಿತಗೊಳಿಸುತ್ತಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಆರೋಪಕ್ಕೆ ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಅವರು ತಿರುಗೇಟು ನೀಡಿದರು.

ವಿಮಾನ ನಿಲ್ದಾಣದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡುತ್ತಿದೆ. ಉಡಾನ್ ಯೋಜನೆ ಕೇಂದ್ರ ಸರ್ಕಾರಕ್ಕೆ ಸೇರಿದ್ದಾಗಿದೆ. ಈ ಕುರಿತು ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಬೇಕಿದೆ ಎಂದರು.
ಶುರುವಿನಲ್ಲಿ ₹200 ಕೋಟಿ ಅಂದಾಜು ವೆಚ್ಚದಲ್ಲಿದ್ದ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಅಂತಿಮವಾಗಿ ₹600 ಕೋಟಿ ವೆಚ್ಚವಾಗಿದೆ. ರಾಜ್ಯ ಸರ್ಕಾರದ ಹಣ ಹಾಗೂ ಶ್ರಮದಿಂದ ನಿರ್ಮಾಣವಾದ ಯೋಜನೆಯನ್ನು ಮುಚ್ಚುವ ಹಂತಕ್ಕೆ ತಂದು ಅದಾನಿ, ಅಂಬಾನಿಯಂತಹ ಖಾಸಗಿ ಉದ್ಯಮಿಗಳಿಗೆ ಮಾರಾಟ ಮಾಡುವುದು ಬಿಜೆಪಿಯ ಮೂಲ ಉದ್ದೇಶವಾಗಿದೆ ಎಂದು ಆರೋಪಿಸಿದರು.
ವಿಮಾನ ನಿಲ್ದಾಣದ ವಿಷಯವಾಗಿ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಅವರೊಂದಿಗೆ ಚರ್ಚಿಸಿದ್ದೇನೆ. ಯಾವುದೇ ಕಾರಣಕ್ಕೂ ವಿಮಾನ ನಿಲ್ದಾಣ ಖಾಸಗೀಕರಣಗೊಳ್ಳಲು ಬಿಡುವುದಿಲ್ಲ. ಈ ಸಂಬಂಧ ಕೇಂದ್ರ ಸರ್ಕಾರಕ್ಕೂ ಪತ್ರ ಬರೆಯಲಾಗುವುದು. ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ವಿಮಾನ ನಿಲ್ದಾಣ ಉದ್ಘಾಟಿಸಿ ಪ್ರಚಾರ ಪಡೆದುಕೊಂಡಿದ್ದರು. ಆದರೆ ಉದ್ಘಾಟನೆಯಾದ ಆರಂಭದಲ್ಲಿ ಹಲವು ತಿಂಗಳು ವಿಮಾನ ಹಾರಾಟವೇ ಇರಲಿಲ್ಲ. ಬಳಿಕ ರಾಜ್ಯ ಸರ್ಕಾರವೇ ಶ್ರಮವಹಿಸಿ ವಿಮಾನ ಸಂಚಾರವನ್ನು ಪುನರಾರಂಭಿಸಿದೆ ಎಂದು ಮಧು ಬಂಗಾರಪ್ಪ ಹೇಳಿದರು.