ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 17 JANUARY 2023
SHIMOGA | ವಸತಿ ಶಾಲೆಯೊಂದರ 50ಕ್ಕೂ ಹೆಚ್ಚು ಮಕ್ಕಳು ದಿಢೀರ್ (children ill) ಅಸ್ವಸ್ಥಗೊಂಡಿದ್ದಾರೆ. ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತುರ್ತು ಚಿಕಿತ್ಸೆ ನೀಡಲಾಗಿದ್ದು, ಎಲ್ಲಾ ಮಕ್ಕಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಪೋಷಕರು, ಅಧಿಕಾರಿಗಳು, ಶಾಸಕರು ಆಸ್ಪತ್ರೆಗೆ ದೌಡಾಯಿಸಿದರು.
ಶಿವಮೊಗ್ಗ ತಾಲೂಕು ಹನಸವಾಡಿಯಲ್ಲಿರುವ ಮೊರಾರ್ಜಿ ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡಿದ್ದಾರೆ (children ill). ಸೋಮವಾರ ಸಂಜೆ ವೇಳೆಗೆ ಮಕ್ಕಳಲ್ಲಿ ಹೊಟ್ಟೆ ನೋವು, ವಾಂತಿ ಕಾಣಿಸಿಕೊಂಡಿದೆ.
ಗುಂಪು ಗುಂಪಾಗಿ ಆಸ್ಪತ್ರೆಗೆ
ಶಾಲೆಯ ಸಿಬ್ಬಂದಿ ಅಸ್ವಸ್ಥಗೊಂಡ ಮಕ್ಕಳನ್ನು ಗುಂಪು ಗುಂಪಾಗಿ ಆಸ್ಪತ್ರೆಗೆ ಕರೆ ತಂದು ದಾಖಲಿಸಿದ್ದಾರೆ. ಸಂಜೆಯಿಂದ ರಾತ್ರಿ 10.30ರವರೆಗು ಆಂಬುಲೆನ್ಸ್ ಮೂಲಕ ಮಕ್ಕಳನ್ನು ಕರೆ ತಂದು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಮಕ್ಕಳಿಗೆ ತುರ್ತು ಚಿಕಿತ್ಸೆ ಒದಗಿಸಲಾಯಿತು.
ದಿಢೀರ್ ಅಸ್ವಸ್ಥಗೊಳ್ಳಲು ಕಾರಣವೇನು?
ವಿಷಾಹಾರ ಸೇವನೆ ಅಥವಾ ಕುಡಿಯುವ ನೀರಿನಲ್ಲಿ ವ್ಯತ್ಯಾಸದಿಂದ ಮಕ್ಕಳು ದಿಢೀರ್ ಅಸ್ವಸ್ಥಗೊಂಡಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆ ಮಕ್ಕಳಿಗೆ (children ill) ಕೂಡಲೆ ಚಿಕಿತ್ಸೆ ನೀಡಲಾಯಿತು.
‘ಮಕ್ಕಳು ಬೆಳಗ್ಗೆ ಚಿತ್ರನ್ನಾ ಸೇವಿಸಿದ್ದಾರೆ. ಮಧ್ಯಾಹ್ನ ಚಪಾತಿ, ಅನ್ನ, ಸಾರು ಊಟ ಮಾಡಿದ್ದಾರೆ. ಸಂಜೆ ವೇಳೆಗೆ ಕೆಲವು ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಆ ಬಳಿಕ ಹೆಚ್ಚಿನ ಸಂಖ್ಯೆಯ ಮಕ್ಕಳು ಹೊಟ್ಟೆ ನೋವು, ಸುಸ್ತು ಮತ್ತು ವಾಂತಿ ಎಂದು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಆಹಾರದಲ್ಲಿ ಅಥವಾ ನೀರಿನಲ್ಲಿ ದೋಷ ಇರುವ ಸಾಧ್ಯತೆ ಇದೆ. ಲ್ಯಾಬಿನಲ್ಲಿ ಪರೀಕ್ಷೆಯಾದ ಬಳಿಕ ಸ್ಪಷ್ಟತೆ ಸಿಗಲಿದೆ’ ಎಂದು ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಸಿಮ್ಸ್) ನಿರ್ದೇಶಕ ಡಾ. ವಿರೂಪಾಕ್ಷಪ್ಪ ತಿಳಿಸಿದರು.
ಕೆಲವು ಮಕ್ಕಳು ಮಾತ್ರ ಅಸ್ವಸ್ಥ
ಮೊರಾರ್ಜಿ ವಸತಿ ಶಾಲೆಯಲ್ಲಿ ಸುಮಾರು 500ಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದಾರೆ. ಸುಮಾರು 60 ಮಕ್ಕಳು ಮಾತ್ರ ಅಸ್ವಸ್ಥಗೊಂಡಿದ್ದಾರೆ. ಉಳಿದ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ಸಿಬ್ಬಂದಿ ತಿಳಿಸಿದ್ದಾರೆ.
‘ವಸತಿ ಶಾಲೆಯಲ್ಲಿ 6 ರಿಂದ 10ನೇ ತರಗತಿವರೆಗೆ ಸುಮಾರು 300 ಮಕ್ಕಳಿದ್ದಾರೆ. 11 ಮತ್ತು 12ನೇ ತರಗತಿಯಲ್ಲಿ 200 ಮಕ್ಕಳಿದ್ದಾರೆ. ಈ ಪೈಕಿ ಅಂದಾಜು 60 ಮಕ್ಕಳು ಮಾತ್ರ ಅಸ್ವಸ್ಥಗೊಂಡಿದ್ದಾರೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಯಾರೂ ಆತಂಕಪಡುವ ಅಗತ್ಯವಿಲ್ಲ’ ಸಿಮ್ಸ್ ನಿರ್ದೇಶಕ ಡಾ. ವಿರೂಪಾಕ್ಷಪ್ಪ ತಿಳಿಸಿದರು.
ಅಧಿಕಾರಿಗಳು, ಶಾಸಕರು ದೌಡು
ವಿಷಯ ತಿಳಿಯುತ್ತಿದ್ದ ಹಾಗೆ ಅಧಿಕಾರಿಗಳ, ಶಾಸಕರು ಮೆಗ್ಗಾನ್ ಆಸ್ಪತ್ರೆಗೆ ದೌಡಾಯಿಸಿದರು. ವೈದ್ಯರೊಂದಿಗೆ ಚರ್ಚೆ ನಡೆಸಿದರು. ಮಕ್ಕಳ ಆರೋಗ್ಯ ವಿಚಾರಿಸಿದರು. ಜಿಲ್ಲಾ ಪಂಚಾಯಿತಿ ಸಿಇಒ ಎನ್.ಡಿ.ಪ್ರಕಾಶ್ ಸೇರಿದಂತೆ ಅಧಿಕಾರಿಗಳು ಮೆಗ್ಗಾನ್ ಆಸ್ಪತ್ರೆಗೆ ದೌಡಾಯಿಸಿದರು. ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ.ಬಿ.ಅಶೋಕ್ ನಾಯ್ಕ್ ಅವರು ಮಕ್ಕಳ ಆರೋಗ್ಯ ವಿಚಾರಿಸಿದರು.
‘ಮೊರಾರ್ಜಿ ಶಾಲೆಯಲ್ಲಿ ಹೈಸ್ಕೂಲ್ ಮತ್ತು ಕಾಲೇಜಿಗೆ ಪ್ರತ್ಯೇಕವಾಗಿ ಅಡುಗೆ ಮಾಡುವ ಮತ್ತು ಊಟದ ವ್ಯವಸ್ಥೆ ಇದೆ. 500ಕ್ಕೂ ಹೆಚ್ಚು ಮಕ್ಕಳು ಅಲ್ಲಿದ್ದಾರೆ. ಕಾಲೇಜಿನ ಕೆಲವು ಮತ್ತು ಶಾಲೆಯ ಕೆಲವು ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ವೈದ್ಯರೊಂದಿಗೆ ಚರ್ಚೆ ನಡೆಸಿದೆ. ಮೇಲ್ನೋಟಕ್ಕೆ ಇದು ನೀರಿನ ಸಮಸ್ಯೆ ಎಂದು ಕಂಡು ಬಂದಿದೆ. ನೀರು ಮತ್ತು ಆಹಾರವನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಳಿಕ ನಿಖರವಾಗಿ ಗೊತ್ತಾಗಲಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ.’ ಎಂದು ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ.ಬಿ.ಅಶೋಕ್ ನಾಯ್ಕ್ ತಿಳಿಸಿದರು.
ಇದನ್ನೂ ಓದಿ – ಶಿವಮೊಗ್ಗದ ಈ ಬ್ರ್ಯಾಂಡ್ ಭಾರಿ ಫೇಮಸ್, ವಿದೇಶಕ್ಕು ತಲುಪುತ್ತಿದೆ ಮಲೆನಾಡ ಟೇಸ್ಟ್, MN ಪಿಕಲ್ಸ್ ಬಗ್ಗೆ ನಿಮಗೆಷ್ಟು ಗೊತ್ತು?
ಸದ್ಯ ಮಕ್ಕಳ ಚಿಕಿತ್ಸೆಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಕೆಲವು ಪೋಷಕರು ಆಸ್ಪತ್ರೆಗೆ ದೌಡಾಯಿಸಿದರು. ಇದರಿಂದ ಆಸ್ಪತ್ರೆ ಆವರಣದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422