ಕಾಡಾನೆ ಸಾವು, ಅರಣ್ಯ ಇಲಾಖೆಯ ಪತ್ರಿಕಾ ಹೇಳಿಕೆ ಬಿಡುಗಡೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಏನಂದ್ರು?

ಶಿವಮೊಗ್ಗ: ತಾಲ್ಲೂಕಿನ ಶಂಕರ ವಲಯ ವ್ಯಾಪ್ತಿಯ ಈಚಲವಾಡಿ ಗ್ರಾಮದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ 10 ರಿಂದ 12 ವರ್ಷದ ಗಂಡು ಕಾಡಾನೆ ಮೃತಪಟ್ಟ ಪ್ರಕರಣ ಸಂಬಂಧ ಅರಣ್ಯ ಇಲಾಕೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. ಘಟನೆಗೆ ಕಾರಣವಾದ ಆರೋಪಿಯನ್ನು ಬಂಧಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ಈ ಸುದ್ದಿಯನ್ನು ಇನ್ನು 58 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಬೆಳಗಿನ ಜಾವ ಕಾಡಾನೆ ಸಾವು

ಈಚಲವಾಡಿ ಗ್ರಾಮದ ಸರ್ವೆ ನಂಬರ್ 16ರ ಭತ್ತದ ಗದ್ದೆಯ ಬದುವಿನಲ್ಲಿ ನವೆಂಬರ್ 7 ರ ಬೆಳಗಿನ ಜಾವ ಕಾಡಾನೆ ಮೃತಪಟ್ಟಿತ್ತು. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಮೃತದೇಹದ ಅಕ್ಕಪಕ್ಕ ತಂತಿ ಬೇಲಿ ಹಾಗೂ ಹತ್ತಿರದಲ್ಲೇ ವಿದ್ಯುತ್ ಕಂಬ ಇದೆ. ವಿದ್ಯುತ್ ಸ್ಪರ್ಶದಿಂದಲೇ ಆನೆ ಅಸುನೀಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Wild-elephant-electrocuted-to-death

ಘಟನೆಗೆ ಸಂಬಂಧಿಸಿದಂತೆ ಅಲಿಮಿಯಾ ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಯನ್ನು ಸ್ಥಳಕ್ಕೆ ಕರೆತಂದು ವಿಚಾರಣೆ ನಡೆಸಲಾಯಿತು. ಭತ್ತದ ಪೈರು ತೆನೆ ಬಿಡುವ ಹಂತದಲ್ಲಿದ್ದರಿಂದ ಇತ್ತೀಚೆಗೆ ಕಾಡುಹಂದಿಗಳ ಉಪಟಳ ಹೆಚ್ಚಾಗಿತ್ತು. ಪ್ರಾಣಿಗಳನ್ನು ತಡೆಯಲು ಗದ್ದೆಯ ಬದುವಿನ ಮೇಲೆ ಶುಕ್ರವಾರ ತಂತಿ ಹಾಕಿ ವಿದ್ಯುತ್ ಸಂಪರ್ಕ ನೀಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಅರಣ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಆರೋಪಿ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಪ್ರಕರಣ ದಾಖಲಿಸಲಾಗಿದೆ. ಅಕ್ರಮ ವಿದ್ಯುತ್ ಸಂಪ0ರ್ಕ ಕಲ್ಪಿಸಿದ ಹಿನ್ನೆಲೆ ವಿದ್ಯುತ್‌ ಕಾಯ್ದೆ ಅಡಿ ಪ್ರಕರಣ ದಾಖಲಿಸಲು ಮೆಸ್ಕಾಂ ಇಲಾಖೆಗೆ ದೂರು ನೀಡಲಾಗಿದೆ. ನಿಯಮಿತ ಕಾರ್ಯವಿಧಾನದ ಪ್ರಕಾರ ಆನೆಯ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಶಿವಮೊಗ್ಗ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.