SHIVAMOGGA LIVE NEWS | 23 FEBRURARY 2023
SHIMOGA : ಪ್ರಧಾನಿ ಭದ್ರತಾ ಪಡೆಯ ಮೊದಲ ತಂಡ ಇವತ್ತು ಶಿವಮೊಗ್ಗಕ್ಕೆ ಆಗಮಿಸಿದೆ. ವಾಯು ಪಡೆ ವಿಮಾನದಲ್ಲಿ ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್ (SPG) ತಂಡ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು.
ವಿಮಾನದಲ್ಲಿ ನಾಲ್ಕು ಕಾರು
ಭಾರತೀಯ ವಾಯು ಸೇನೆಯ ಕ್ಯಾರಿಯರ್ ವಿಮಾನದಲ್ಲಿ ದೆಹಲಿಯಿಂದ ಭದ್ರತಾ ಪಡೆಗಳ ತಂಡ ಆಗಮಿಸಿತು. ವಿಮಾನದಲ್ಲಿ ನಾಲ್ಕು ಕಾರುಗಳ ಸಹಿತ ಹಲವು ಸಿಬ್ಬಂದಿ ಆಗಮಿಸಿದರು. ವಾಯುಸೇನೆಯ ಇಲ್ಯೂಷಿನ್ 76 ವಿಮಾನದಿಂದ ನಾಲ್ಕು ಕಾರುಗಳನ್ನು ಕೆಳಗಿಳಿಸಿ ಪರಿಶೀಲನೆ ಆರಂಭಿಸಿತು.
ಎಸ್.ಪಿ.ಜಿ ತಂಡದ ಪರಿಶೀಲನೆ
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಜಿಲ್ಲಾಧಿಕಾರಿ ಸೇರಿ ಪ್ರಮುಖ ಅಧಿಕಾರಿಗಳನ್ನು SPG ತಂಡ ಭೇಟಿಯಾಯಿತು. ಬಳಿಕ ವಿಮಾನ ನಿಲ್ದಾಣದ ಟರ್ಮಿನಲ್ ಪರಿಶೀಲನೆ ನಡೆಸಿತು. ಅಲ್ಲಿಂದ ನೇರವಾಗಿ ತಮ್ಮ ವಾಹನಗಳ ಮೂಲಕವೆ ಶಿವಮೊಗ್ಗ ನಗರಕ್ಕೆ SPG ತಂಡ ತೆರಳಿತು.
ಪ್ರಧಾನಿ ನರೇಂದ್ರ ಮೋದಿ ಅವರು ಫೆ.27ರಂದು ವಿಮಾನ ನಿಲ್ದಾಣದ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆ ವಿಮಾನ ನಿಲ್ದಾಣದ ಆವರಣದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.