ಶಿವಮೊಗ್ಗ: ಆಹಾರ ಅಂಕಿತ ಅಧಿಕಾರಿಗಳು ದಾಳಿ ಮುಂದುವರೆಸಿದ್ದಾರೆ. ಇವತ್ತು ಅಡಿಕೆ ಸಂಸ್ಕರಣಾ ಘಟಕದ ಮೇಲೆ ಉಪವಿಭಾಗಾಧಿಕಾರಿ ಡಾ.ಮೈತ್ರಿ ನೇತೃತ್ವದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದರು. ಅಡಿಕೆ ಮಾದರಿ ಸಂಗ್ರಹಿಸಿದ್ದು ಪರೀಕ್ಷೆಗೆ ರವಾನಿಸಿದ್ದರೆ.
ಶಿವಮೊಗ್ಗ ತಾಲ್ಲೂಕಿನ ಬುಳ್ಳಾಪುರದಲ್ಲಿರುವ ಅಡಿಕೆ ಸಂಸ್ಕರಣಾ ಘಟಕದ ಮೇಲೆ ಇಂದು ದಿಢೀರ್ ದಾಳಿ ನಡೆಸಿದರು. ದಾಳಿ ಸಂದರ್ಭ ಅಡಿಕೆ ಮಾದರಿ ಸಂಗ್ರಹಿಸಲಾಗಿದೆ. ಬಣ್ಣ ಬಳಸಿರುವುದು ಪತ್ತೆಯಾದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉಪ ವಿಭಾಗಾಧಿಕಾರಿ ಡಾ. ಮೈತ್ರಿ ಎಚ್ಚರಿಕೆ ನೀಡಿದರು.

ಅಡಿಕೆಗೆ ಕೃತಕ ಬಣ್ಣ ಬಳಕೆ ಆರೋಪ
ಅಡಿಕೆಗೆ ಹೆಚ್ಚು ಕೆಂಪು, ಆಕರ್ಷಕ ಬಣ್ಣ ಬರಲು ವಿವಿಧೆಡೆ ನಿಷೇಧಿತ ರಸಾಯನಿಕ ಬಣ್ಣ ಬಳಸಲಾಗುತ್ತಿದೆ ಎಂದು ಸಾರ್ವಜನಿಕರ ದೂರು ಬಂದಿತ್ತು. ಕಡಿಮೆ ದರ್ಜೆಯ ಅಡಿಕೆಯನ್ನು ಉತ್ತಮ ದರ್ಜೆಯಂತೆ ಬಿಂಬಿಸಲು ಬಣ್ಣ ಬಳಕೆ ಮಾಡಲಾಗುತ್ತಿದೆ. ಈ ಬಣ್ಣಗಳ ಬಳಕೆಯಿಂದ ಯಕೃತ್ತು ಹಾಗೂ ಮೂತ್ರಪಿಂಡಗಳು ಹಾನಿಯಾಗುತ್ತವೆ. ಇಂತಹ ಅಡಿಕೆ ಸೇವನೆಯಿಂದ ಬಾಯಿ ಕ್ಯಾನ್ಸರ್, ಹೊಟ್ಟೆ ಹುಣ್ಣು ಮತ್ತು ಉಸಿರಾಟದ ತೊಂದರೆ ಉಂಟಾಗುತ್ತದೆ ಎಂದು ಡಾ. ಮೈತ್ರಿ ತಿಳಿಸಿದ್ದಾರೆ.
ಅಡಿಕೆಯಲ್ಲಿ ಕೃತಕ ಬಣ್ಣ ಬಳಸುವುದು ನಿಷೇಧವಿದೆ. ಹಾಗಾಗಿಯೇ ಇಂತಹ ಬಣ್ಣ ಬಳಕೆ ಮಾಡಿರುವ ಅಡಿಕೆಯ ಲಾಟ್‌ಗಳು ಹೊರ ರಾಜ್ಯ ಹಾಗೂ ವಿದೇಶಗಳಲ್ಲಿ ತಿರಸ್ಕೃತಗೊಂಡಿವೆ. ರಾಸಾಯನಿಕ ಬಳಕೆ ಮಾಡಿದ ಅಡಿಕೆ ಬೇಗ ಹಾಳಾಗಿ ಫಂಗಸ್ ಬೆಳೆಯುತ್ತವೆ. ನೈಸರ್ಗಿಕ ರುಚಿ ಕಳೆದುಕೊಳ್ಳುತ್ತದೆ ಎಂದು ಉಪ ವಿಭಾಗಾಧಿಕಾರಿ ತಿಳಿಸಿದರು.
ಕಾರ್ಯಾಚರಣೆಯಲ್ಲಿ ತಹಶೀಲ್ದಾರ್ ರಾಜೀವ್ ಹಾಗೂ ಇಲಾಖೆಯ ಸಿಬ್ಬಂದಿ ಲಿಂಗರಾಜ್, ಕೀರ್ತಿಕುಮಾರ್, ಶ್ರವಣಕುಮಾರ್, ಶ್ವೇತಾ, ಸುಮಾ ಮತ್ತು ಮನೋಜ್ ಉಪಸ್ಥಿತರಿದ್ದರು.