ಜೀವದ ಹಂಗು ತೊರೆದು ಕೆಲಸ ಮಾಡಿದ ಸಕ್ರೆಬೈಲು ಬಿಡಾರದ ಮಾವುತರಿಗೆ ಆರ್ಥಿಕ ನೆರವು

ಶಿವಮೊಗ್ಗ: ಶಿವಮೊಗ್ಗ ದಸರಾ ಮಹೋತ್ಸವದ ಮೆರವಣಿಗೆ ಸಂದರ್ಭ ಅಂಬಾರಿ ಹೊತ್ತ ಸಕ್ರೆಬೈಲ್‌ ಬಿಡಾರದ ಸೋಮಣ್ಣ ಆನೆಯು ಬೆಚ್ಚಿ ಓಡಿ ಆತಂಕಕಾರಿ ವಾತಾವರಣ ನಿರ್ಮಾಣವಾದಾಗ, ತಮ್ಮ ಜೀವದ ಹಂಗು ತೊರೆದು ಸಾರ್ವಜನಿಕರ ಸುರಕ್ಷತೆಗೆ ಶ್ರಮಿಸಿದ ಮಾವುತರು ಮತ್ತು ಕಾವಾಡಿಗರ ಕಾರ್ಯವನ್ನು ರಾಜ್ಯ ಸರ್ಕಾರಿ ನೌಕರರ ಸಂಘ ಶ್ಲಾಘಿಸಿದೆ. (ಈ ಸುದ್ದಿಯನ್ನು ಇನ್ನು 54 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಮಾವುತರು ಆನೆಯನ್ನು ನಿಯಂತ್ರಿಸಲು ಮುಂದಾಗದಿದ್ದರೆ ಭಾರಿ ಪ್ರಮಾಣದ ಪ್ರಾಣಹಾನಿ ಸಂಭವಿಸುವ ಸಾಧ್ಯತೆಯಿತ್ತು. ಅವರ ಧೈರ್ಯ, ಸಮಯಪ್ರಜ್ಞೆ ಮತ್ತು ಕರ್ತವ್ಯನಿಷ್ಠೆಗೆ ಗೌರವ ಸಲ್ಲಿಸುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಸಂಘ ತಿಳಿಸಿದೆ.

CS-Shadakshari-Honors-Mahuts-at-Sakrebyle

ಆರ್ಥಿಕ ನೆರವು, ಅಭಿನಂದನೆ

ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷ ಆರ್. ಮೋಹನ್ ಕುಮಾರ್ ಅವರು ಸಕ್ರೆಬೈಲ್ ಆನೆ ಶಿಬಿರಕ್ಕೆ ಭೇಟಿ ನೀಡಿ, ಮಾವುತರಾದ ಮನೋಜ್, ವಿಜಯ್, ಇಂಪ್ತಿಯಾಜ್ ಮತ್ತು ಮೇರಾಜ್ ಅವರನ್ನು ಅಭಿನಂದಿಸಿದರು. ಸಂಘದ ವತಿಯಿಂದ ಅವರಿಗೆ ₹10,000 ಆರ್ಥಿಕ ನೆರವು ನೀಡಿದರು. ಸಂಕಷ್ಟದ ಸಮಯದಲ್ಲಿ ಅವರೊಂದಿಗೆ ನಿಲ್ಲುವ ಮಾನವೀಯ ಕಾಳಜಿ ಮತ್ತು ಸಾಮಾಜಿಕ ಬದ್ಧತೆ ವ್ಯಕ್ತಪಡಿಸಲಾಯಿತು.

ವಿಶೇಷ ಭತ್ಯೆ, ವೈದ್ಯಕೀಯ ವಿಮೆ ಕುರಿತು ಚರ್ಚೆ

ರಾಜ್ಯದಲ್ಲಿ ಅಂದಾಜು 100 ಮಾವುತರು ಕಾರ್ಯನಿರ್ವಹಿಸುತ್ತಿದ್ದಾರೆ. ಸಿಬ್ಬಂದಿಯ ಒತ್ತಡ ಪರಿಗಣಿಸಿ ಅವರಿಗೆ ವಿಶೇಷ ಭತ್ಯೆ ಹಾಗೂ ವೈದ್ಯಕೀಯ ವಿಮೆ ಸೌಲಭ್ಯಗಳನ್ನು ಒದಗಿಸುವ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಷಡಾಕ್ಷರಿ ಭರವಸೆ ನೀಡಿದರು.