ಶಿವಮೊಗ್ಗ: ಸೋಗಾನೆಯಲ್ಲಿರುವ ಶಿವಮೊಗ್ಗ ವಿಮಾನ ನಿಲ್ದಾಣದಿಂದ ನವೆಂಬರ್ 21 ರಿಂದ ಎಲ್ಲ ವಿಮಾನ ಸೇವೆಗಳು ಸಂಪೂರ್ಣವಾಗಿ ಸ್ಥಗಿತಗೊಳ್ಳಲಿವೆ. ನಿಲ್ದಾಣದಿಂದ ಪ್ರಸ್ತುತ ಹಾರಾಟ ನಡೆಸುತ್ತಿರುವ ಏಕೈಕ ಸಂಸ್ಥೆ ಸ್ಟಾರ್ ಏರ್ ತನ್ನ ಕಾರ್ಯಾಚರಣೆ ರದ್ದುಗೊಳಿಸಲು ನಿರ್ಧರಿಸಿದೆ. (ಈ ಸುದ್ದಿಯನ್ನು ಇನ್ನು 49 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಕೇಂದ್ರ ಸರ್ಕಾರದ ಪ್ರಾದೇಶಿಕ ಸಂಪರ್ಕ ಯೋಜನೆಯಾದ ಆರ್ಸಿಎಸ್–ಉಡಾನ್ ಅಡಿಯಲ್ಲಿ ಸಂಸ್ಥೆಗೆ ದೊರೆಯುತ್ತಿದ್ದ ಆರ್ಥಿಕ ಸಬ್ಸಿಡಿಯ ಅವಧಿಯು ಮುಕ್ತಾಯಗೊಳ್ಳುತ್ತಿದೆ. ಸರ್ಕಾರದ ಧನಸಹಾಯ ಸ್ಥಗಿತಗೊಳ್ಳುತ್ತಿರುವುದೇ ವಿಮಾನ ಸೇವೆ ರದ್ದತಿಗೆ ಪ್ರಮುಖ ಕಾರಣವಾಗಿದೆ.

ಮೂರು ಮಾರ್ಗದ ವಿಮಾನ
ಸ್ಟಾರ್ ಏರ್ ಸಂಸ್ಥೆಯು 2023ರ ನವೆಂಬರ್ 21ರಿಂದ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಕಾರ್ಯಾಚರಣೆ ಆರಂಭಿಸಿತ್ತು. ಶಿವಮೊಗ್ಗದಿಂದ ಹೈದರಾಬಾದ್, ಗೋವಾ ಮತ್ತು ತಿರುಪತಿಗೆ ವಿಮಾನಯಾನ ಸೇವೆ ನೀಡಿತ್ತುತ್ತು. ಮೂರು ವರ್ಷದ ಬಳಿಕ ಸ್ಟಾರ್ ಏರ್ ಸಂಸ್ಥೆ ಸೇವೆ ಸ್ಥಗಿತಗೊಳಿಸುತ್ತಿದೆ. ಈಗಾಗಲೇ ತನ್ನ ಟಿಕೆಟ್ ಬುಕಿಂಗ್ ಪ್ರಕ್ರಿಯೆ ಸ್ಥಗಿತಗೊಂಡಿದ್ದು, ನವೆಂಬರ್ 20ರ ತನಕ ವಿಮಾನದಲ್ಲಿ ಸೀಟ್ ಬುಕಿಂಗ್ಗೆ ಅವಕಾಶ ಕಲ್ಪಿಸಲಾಗಿದೆ.
ಮಲೆನಾಡಿಗರಿಗೆ ನಿರಾಸೆ
ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನ ಸಂಚಾರ ನಿಲ್ಲುತ್ತಿರುವುದು ಮಲೆನಾಡು ಭಾಗದ ವಾಯು ಸಂಪರ್ಕಕ್ಕೆ ತೀವ್ರ ಹಿನ್ನಡೆಯಾಗಿದೆ. ಈಗಾಗಲೇ ಇಂಡಿಗೋ, ಸ್ಪೈಸ್ ಜೆಟ್ ಸಂಸ್ಥೆಗಳು ಶಿವಮೊಗ್ಗದಿಂದ ವಿಮಾನಯಾನ ಸೇವೆ ಸ್ಥಗಿತಗೊಳಿಸಿವೆ. ಈಗ ಸ್ಪೈಸ್ ಜೆಟ್ ಕೂಡ ಇದೇ ಹಾದಿ ಹಿಡಿದಿದೆ.