ಬೆಂಗಳೂರು: ಜೀ ಕನ್ನಡ ವಾಹಿನಿಯ ಸರಿಗಮಪ ಜೂನಿಯರ್-22 ರಿಯಾಲಿಟಿ ಶೋ ಸ್ಪರ್ಧಿ, ಸೊರಬ ತಾಲೂಕಿನ ಹರೀಶಿ ಗ್ರಾಮದ ಸರ್ಕಾರಿ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಕೀರ್ತಿ ಎಸ್. ಅವರನ್ನು ಮಾಜಿ ಸಚಿವ ಮಧು ಬಂಗಾರಪ್ಪ ಅವರು ಸದಾಶಿವನಗರದ ತಮ್ಮ ನಿವಾಸದಲ್ಲಿ ಸನ್ಮಾನಿಸಿ, ಶುಭ ಹಾರೈಸಿದರು.
ಈ ಸಂದರ್ಭ ಮಾತನಾಡಿದ ಅವರು, ‘ಗ್ರಾಮೀಣ ಭಾಗದ ಬಡ ಕುಟುಂಬದ ಕೀರ್ತಿ ಅದ್ಭುತ ಗಾಯನದ ಮೂಲಕ ರಾಜ್ಯದ ಗಮನ ಸೆಳೆದಿದ್ದಾರೆ. ಸಂಗೀತ ಪ್ರಿಯರಾಗಿದ್ದ ನನ್ನ ತಂದೆ, ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ಇಂದು ಇದ್ದಿದ್ದರೆ ಈ ಹೆಮ್ಮೆಯ ಪ್ರತಿಭೆಯನ್ನು ಕಂಡು ಸಂತೋಷ ಪಡುತ್ತಿದ್ದರು. ಸೌಲಭ್ಯಗಳ ಕೊರತೆಯ ನಡುವೆಯೂ ದೊಡ್ಡ ವೇದಿಕೆಯಲ್ಲಿ ಮಿಂಚುತ್ತಿರುವ ಕೀರ್ತಿ ಅವರ ಸಾಧನೆ ಗ್ರಾಮೀಣ ಭಾಗದ ಇತರೆ ಮಕ್ಕಳಿಗೆ ಪ್ರೇರಣೆಯಾಗಿದೆ’ ಎಂದರು.

ಆಕಾಶ್ ಆಡಿಯೋ ಸ್ಟುಡಿಯೋ ವೀಕ್ಷಣೆ
ಕೀರ್ತಿ ಅವರ ಜೊತೆಗೆ ಆಗಮಿಸಿದ್ದ ಶಾಲೆಯ ಮಕ್ಕಳಿಗೆ ಆಧುನಿಕ ಸಂಗೀತ ಲೋಕದ ಪರಿಚಯ ಮಾಡಿಸುವ ಉದ್ದೇಶದಿಂದ ಮಧು ಬಂಗಾರಪ್ಪ ಅವರ ಒಡೆತನದ ಆಕಾಶ್ ಆಡಿಯೋ ಸ್ಟುಡಿಯೋ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು.

ಲೈವ್ ರೆಕಾರ್ಡಿಂಗ್ ಹಾಗೂ ತಾಂತ್ರಿಕ ಪ್ರಕ್ರಿಯೆಗಳನ್ನು ಪ್ರತ್ಯಕ್ಷವಾಗಿ ಕಂಡು ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಕೀರ್ತಿ ಅವರ ಪೋಷಕರು ಹಾಗೂ ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.