ಸೊರಬ: ಮದುವೆ ದಿಬ್ಬಣದ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ತಾಲೂಕಿನ ಕುಪ್ಪಗಡ್ಡೆ ಸಮೀಪದ ಕೊರಕೋಡು ಕ್ರಾಸ್‌ನ ಇರ್ಪಿನ ಕೆರೆ ಏರಿ ಮೇಲೆ ನಡೆದಿದೆ.
ಹಾನಗಲ್‌ನಲ್ಲಿ ನಡೆಯುತ್ತಿದ್ದ ವಿವಾಹ ಸಮಾರಂಭಕ್ಕೆ ಸಿದ್ದಾಪುರದಿಂದ ತೆರಳುತ್ತಿದ್ದ ಖಾಸಗಿ ಬಸ್, ಸೊರಬ, ಆನವಟ್ಟಿ ಮಾರ್ಗವಾಗಿ ಸಂಚರಿಸುತ್ತಿತ್ತು. ಇಲ್ಲಿನ ಕೆರೆ ಏರಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಗಟಾರಕ್ಕೆ ಬಿದ್ದಿದೆ. ಅಪಘಾತದ ವೇಳೆ ಪ್ರಯಾಣಿಕರು ಗಾಬರಿಗೊಂಡು ಕೂಗಾಡಿದ್ದಾರೆ.

ಸ್ಥಳೀಯರಿಂದ ರಕ್ಷಣಾ ಕಾರ್ಯ
ಸ್ಥಳೀಯರು ತಕ್ಷಣ ಧಾವಿಸಿ ರಕ್ಷಣಾ ಕಾರ್ಯಕ್ಕೆ ಮುಂದಾದರು. ಕೆರೆ ಪಕ್ಕದಲ್ಲಿದ್ದ ತಡೆ ಕಲ್ಲುಗಳು ಬಸ್‌ನ ವೇಗವನ್ನು ನಿಯಂತ್ರಿಸಿದ್ದರಿಂದ ದೊಡ್ಡ ದುರಂತ ತಪ್ಪಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಬಸ್‌ನಲ್ಲಿ ಸುಮಾರು 50 ಜನ ಪ್ರಯಾಣಿಸುತ್ತಿದ್ದರು. ಈ ಪೈಕಿ ಒಟ್ಟು 15 ಜನರು ಗಾಯಗೊಂಡಿದ್ದಾರೆ. ಅವರಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿವೆ. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಗಾಯಾಳುಗಳನ್ನು ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಬೇರೆಡೆ ಕಳುಹಿಸಲಾಗಿದೆ. ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರಕ್ಕೆ ತೆರಳುತ್ತಿದ್ದ ಬಸ್ ಪಲ್ಟಿ
ಹೊಸನಗರ: ಪಟ್ಟಣದ ಹೊರವಲಯದ ಜಯನಗರ ಚಾಮುಂಡಿ ಬೆಟ್ಟದ ತಿರುವಿನಲ್ಲಿ ಶುಕ್ರವಾರ ಮುಂಜಾನೆ 5.15ರ ಸಮಯದಲ್ಲಿ ಬೆಂಗಳೂರಿಂದ ಕುಂದಾಪುರಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಪಲ್ಟಿಯಾಗಿದೆ. 11 ಪ್ರಯಾಣಿಕರು ಗಾಯಗೊಂಡಿದ್ದಾರೆ.
ಬಸ್‌ನಲ್ಲಿ 11 ಪ್ರಯಾಣಿಕರಷ್ಟೆ ಇದ್ದರು. ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬಸ್ ಎಡಭಾಗಕ್ಕೆ ಪಲ್ಟಿ ಆಯಿತು. ನಿದ್ರೆಯಲ್ಲಿದ್ದ 11 ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿತ್ತು. ಹೊಸನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಕಳುಹಿಸಿಕೊಡಲಾಯಿತು. ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


