ತೀರ್ಥಹಳ್ಳಿ: ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾಯಿಯನ್ನು ಮನೆಗೆ ಕರೆತರಲು ತೆರಳುತ್ತಿದ್ದಾಗ ಕಾರು ಅಪಘಾತವಾಗಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೊಬ್ಬ ವ್ಯಕ್ತಿಗೆ ಅದೃಷ್ಟವಶಾತ್ ಪಾರಾಗಿದ್ದಾರೆ. (ಈ ಸುದ್ದಿಯನ್ನು ಇನ್ನು 52 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಆಯನೂರು ಸಮೀಪದ ಕೋಟೆತಾಂಡಾ ನಿವಾಸಿ ರವಿಕುಮಾರ್ (63) ಮೃತ ವ್ಯಕ್ತಿ. ಅಕ್ಟೋಬರ್ 24 ರಂದು ಬೆಳಿಗ್ಗೆ 4 ಗಂಟೆಗೆ ರವಿಕುಮಾರ್ ಹಾಗೂ ಅವರ ಅಳಿಯ ಮಂಜುನಾಥ್ ತಮ್ಮ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಆಯನೂರು ಕೋಟೆ ತಾಂಡಾದಿಂದ ಮಂಗಳೂರಿಗೆ ಹೊರಟಿದ್ದರು. ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಂಜುನಾಥ್ ಅವರ ತಾಯಿ ಗೀತಾಬಾಯಿ ಅವರನ್ನು ಮನೆಗೆ ಕರೆತರಲು ಕಾರಿನಲ್ಲಿ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ.

ಬೆಳಿಗ್ಗೆ 5:40ರ ಹೊತ್ತಿಗೆ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಚರ್ಚ್ ಸೇತುವೆ ಬಳಿಯ ತಿರುವಿನಲ್ಲಿ ಕಾರು ಸಂಚರಿಸುತ್ತಿದ್ದಾಗ, ಚಾಲಕ ರವಿಕುಮಾರ್ ಅವರ ನಿಯಂತ್ರಣ ತಪ್ಪಿ ರಸ್ತೆಬದಿಯ ಸೂಚನಾ ಫಲಕದ ಕಂಬಕ್ಕೆ ಕಾರು ಡಿಕ್ಕಿಯಾಗಿದೆ. ಘಟನೆಯಲ್ಲಿ ಕಾರು ಪಲ್ಟಿಯಾಗಿದ್ದು, ರವಿಕುಮಾರ್ ಅವರ ಹಣೆಗೆ ಸ್ಟೇರಿಂಗ್ ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಮಂಜುನಾಥ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅದೇ ಮಾರ್ಗದಲ್ಲಿ ಬಂದ ಲಾರಿ ಚಾಲಕನ ನೆರವಿನಿಂದ ರವಿಕುಮಾರ್ ಅವರನ್ನು ಕಾರಿನಿಂದ ಹೊರಗೆ ಎಳೆದು ಕಾರಿನಲ್ಲಿ ತೀರ್ಥಹಳ್ಳಿಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪರೀಕ್ಷಿಸಿದ ವೈದ್ಯರು ರವಿಕುಮಾರ್ ಮೃತಪಟ್ಟಿರುವುದನ್ನು ಖಚಿತಪಡಿಸಿದರು. ಘಟನೆ ಸಂಬಂಧ ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.