ತೀರ್ಥಹಳ್ಳಿ ಅಪಘಾತ, ಸಾವಿನ ಸಂಖ್ಯೆ ಹೆಚ್ಚಳ, ಆಗಿದ್ದೇನು? ಇಲ್ಲಿದೆ ಫುಲ್‌ ಡಿಟೇಲ್ಸ್‌

 ಶಿವಮೊಗ್ಗ  LIVE 

ತೀರ್ಥಹಳ್ಳಿ: ತಾಲೂಕಿನ ಭಾರತೀಪುರ ಕ್ರಾಸ್‌ನಲ್ಲಿ ಕಳೆದ ರಾತ್ರಿ ಭೀಕರ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಮೃತಪಟ್ಟವರ (Death toll) ಸಂಖ್ಯೆ ಈಗ ನಾಲ್ಕಕ್ಕೆ ಏರಿಕೆಯಾಗಿದೆ. ಇನ್ನು, ಮೂವರಿಗೆ ಗಾಯವಾಗಿದ್ದು ಅವರಿಗೆ ಚಿಕಿತ್ಸೆ ಮುಂದುವರೆದಿದೆ.

ಅಪಘಾತ ಆಗಿದ್ದು ಹೇಗೆ?

Sigandur-Janthre-2026-scaled.

ಕೆಎಸ್‌ಆರ್‌ಟಿಸಿ ಬಸ್‌ ಮಂಗಳೂರಿನಿಂದ ರಾಯಚೂರಿಗೆ ಹೋಗುತ್ತಿತ್ತು. ಸ್ವಿಫ್ಟ್‌ ಡಿಸೈರ್‌ ಕಾರು ಚನ್ನಗಿರಿಯಿಂದ ಶೃಂಗೇರಿ ಕಡೆಗೆ ತೆರಳುತಿತ್ತು. ತೀರ್ಥಹಳ್ಳಿ ತಾಲೂಕು ಭಾರತೀಪುರದ ಭುವನೇಶ್ವರಿ ದೇವಸ್ಥಾನದ ಎದುರು ತಿರುವಿನಲ್ಲಿ ಸ್ವಿಫ್ಟ್‌ ಡಿಸೈರ್‌ ಕಾರು, ಮುಂದೆ ಹೋಗುತ್ತಿದ್ದ ಇನ್ನೊಂದು ಕಾರು ಮತ್ತು ಟೆಂಪೋವನ್ನು ಹಿಂದಿಕ್ಕಲು ಯತ್ನಿಸಿತು. ಈ ವೇಳೆ ಎದುರಿನಿಂದ ಬಂದ ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದಿದೆ.

ಸ್ಥಳದಲ್ಲೇ ಇಬ್ಬರು ಸೇರಿ ನಾಲ್ವರು ಸಾವು

ಕಾರಿನಲ್ಲಿದ್ದ ಫಾತೀಮಾ (70), ರಿಹಾನ್‌ (14) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನುಳಿದವರಿಗೆ ತೀವ್ರ ಗಾಯಗಳಾಗಿದ್ದು ಕೂಡಲೆ ಎಲ್ಲರನ್ನು ತೀರ್ಥಹಳ್ಳಿಯ ಜೆ.ಸಿ.ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ರಾಹಿಲ್‌ (9) ಮತ್ತು ಝಯಾನ್‌ (12) ಸಾವನ್ನಪ್ಪಿದ್ದಾರೆ.

ಕಾರಿನಲ್ಲಿದ್ದ ಝರೀನಾ (35), ರಿಹಾ (12) ಮತ್ತು ಕಾರು ಚಾಲನೆ ಮಾಡುತ್ತಿದ್ದ ಜಯಾನ್‌ಗೆ ಚಿಕಿತ್ಸೆ ಮುಂದುವರೆದಿದೆ. ಇವರೆಲ್ಲ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕು ಮೆಣಸೆ ಗ್ರಾಮದವರು.

Thirthahalli-Accident-Bus-and-Car.
Death toll raises

ಬಸ್ಸಿನಲ್ಲಿದ್ದವರು ಅದೃಷ್ಟವಶಾತ್‌ ಪಾರು

ಇನ್ನು, ಡಿಕ್ಕಿಯ ರಭಸಕ್ಕೆ ಕಾರಿನ ಒಂದು ಭಾಗ ನುಜ್ಜುಗುಜ್ಜಾಗಿದೆ. ಇದು ಅಪಘಾತದ ಭೀಕರತೆಗೆ ಸಾಕ್ಷಿಯಾಗಿದೆ. ಕೆಎಸ್‌ಆರ್‌ಟಿಸಿ ಬಸ್ಸಿನ ಮುಂಭಾಗಕ್ಕೆ ಹಾನಿಯಾಗಿದ್ದು, ಗಾಜು ಒಡೆದಿದೆ. ಬಸ್ಸಿನಲ್ಲಿದ್ದ ಪ್ರಯಾಣಿಕರು ಅದೃಷ್ಟವಶಾತ್‌ ಪಾರಾಗಿದ್ದಾರೆ.

ಸ್ಥಳಕ್ಕೆ ಎಎಸ್‌ಪಿ ಭೇಟಿ, ಪರಿಶೀಲನೆ

ಘಟನೆಯ ಸ್ಥಳಕ್ಕೆ ಶಿವಮೊಗ್ಗದ ಹೆಚ್ಚುವರಿ ಅಧೀಕ್ಷಕ ಎ.ಜಿ.ಕಾರ್ಯಪ್ಪ ಭೇಟಿ ನೀಡಿದ್ದರು. ಅಪಘಾತದ ಕುರಿತು ತೀರ್ಥಹಳ್ಳಿ ಡಿವೈಎಸ್‌ಪಿ ಮತ್ತು ಇನ್ಸ್‌ಪೆಕ್ಟರ್‌ ಅವರಿಂದ ಮಾಹಿತಿ ಪಡೆದರು. ಅಲ್ಲದೆ ತನಿಖೆ ಕುರಿತು ಸೂಚನೆ ನೀಡಿದರು.

police

ಕಾರು ಚಾಲಕನ ವಿರುದ್ಧ ಕೇಸ್‌

ಅಪಘಾತ ಸಂಬಂಧ ಕಾರು ಚಾಲಕ ಜಯಾನ್‌ ವಿರುದ್ಧ ಪ್ರಕರಣ ದಾಖಲಾಗಿದೆ. ಕೆಎಸ್‌ಆರ್‌ಟಿಸಿ ಬಸ್‌ ಚಾಲಕ ಶಶಿಕಾಂತ್‌ ನೀಡಿದ ದೂರಿನ ಹಿನ್ನೆಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅತಿ ವೇಗ ಮತ್ತು ಅಜಾಗರೂಕತೆಯ ಚಾಲನೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ » ಶಿವಮೊಗ್ಗ ಕೇಂದ್ರ ಕಾರಾಗೃಹದ ಕೈದಿ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಸಾವು, ಆಗಿದ್ದೇನು?

ಬಿ.ವಿ.ಶ್ರೀನಿವಾಸ್‌ ನೆರವು

ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಆಸ್ಪತ್ರೆ ಖರ್ಚು ಭರಿಸಲಾಗದೆ ಕುಟುಂಬದವರು ಪರಿತಪಿಸುತ್ತಿದ್ದರು. ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಭದ್ರಾವತಿ ಮೂಲದ ಬಿ.ವಿ.ಶ್ರೀನಿವಾಸ್‌ ತಕ್ಷಣ ಸ್ಪಂದಿಸಿದ್ದು, ಆಸ್ಪತ್ರೆಯ ಬಿಲ್‌ ಪಾವತಿಗೆ ನೆರವಾಗಿದ್ದಾರೆ.

ಭಾರತೀಪುರ ತಿರುವು ಅತ್ಯಂತ ಅಪಾಯಕಾರಿ ತಾಣವಾಗಿದೆ. ಈ ಭಾಗದಲ್ಲಿ ಅಪಘಾತ ಸಾಮಾನ್ಯ. ಇಂತಹ ಸ್ಥಳದಲ್ಲಿ ವಾಹನ ಚಾಲಕರು ನಿಧಾನವಾಗಿ ಚಲಿಸಿದರೆ ಪ್ರಾಣಹಾನಿ ತಪ್ಪಿಸಬಹುದಾಗಿದೆ. ಇನ್ನು, ಘಟನೆ ಸಂಬಂಧ ತೀರ್ಥಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment