ಐರಾವತ ಬಸ್ಸಿನಲ್ಲಿ ವಿಚಿತ್ರ ಕಳ್ಳತನ: ಬ್ಯಾಗ್‌ ಜಿಪ್‌, ಲಾಕ್‌ ಒಡೆಯದೆ ಲಕ್ಷ ಲಕ್ಷದ ಬಂಗಾರ ಮಿಸ್ಸಿಂಗ್‌, ಆಗಿದ್ದೇನು?

ತೀರ್ಥಹಳ್ಳಿ: ಬೆಂಗಳೂರಿನಿಂದ ತೀರ್ಥಹಳ್ಳಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಐರಾವತ ಬಸ್ಸಿನಲ್ಲಿ ಚಿನ್ನದ ವ್ಯಾಪಾರಿಯೊಬ್ಬರ ಬ್ಯಾಗ್‌ನಿಂದ ಸುಮಾರು ₹34.52 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ. ➤ ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.

ಬೆಂಗಳೂರಿನ ನಿವಾಸಿ, ಚಿನ್ನದ ವ್ಯಾಪಾರಿ ಕಲೈವನನ್ (45) ಹಣ ಮತ್ತು ಆಭರಣ ಕಳೆದುಕೊಂಡವರು. ಅವರು ಕಳೆದ 10 ವರ್ಷಗಳಿಂದ ತೀರ್ಥಹಳ್ಳಿ ಸುತ್ತಮುತ್ತಲಿನ ಜುವೆಲರಿ ಅಂಗಡಿಗಳಿಗೆ ಚಿನ್ನದ ಆಭರಣಗಳನ್ನು ಪೂರೈಸುವ ಕೆಲಸ ಮಾಡುತ್ತಿದ್ದರು.

Ksrtc-airavat-club-class-bus

ಮೆಜೆಸ್ಟಿಕ್‌ನಲ್ಲಿ ಅಣ್ಣ, ತಮ್ಮ ಬಸ್‌ ಹತ್ತಿದರು

ತೀರ್ಥಹಳ್ಳಿಯ ಅಂಗಡಿಗಳಿಂದ ಬಂದಿದ್ದ ಆರ್ಡರ್ ಹಿನ್ನೆಲೆ ಕಲೈವನನ್ ಅವರು ರಾತ್ರಿ ತಮ್ಮ ಅಣ್ಣ ಕರುಣಾಕರ್ ಅವರೊಂದಿಗೆ ಬೆಂಗಳೂರಿನ ಮೆಜೆಸ್ಟಿಕ್‌ನಿಂದ ತೀರ್ಥಹಳ್ಳಿಗೆ ಹೊರಡುವ ಐರಾವತ ಬಸ್ ಹತ್ತಿದ್ದರು. ಆಭರಣಗಳಿದ್ದ ಬ್ಯಾಗ್‌ ಅನ್ನು ತಮ್ಮ ಸೀಟಿನ ಮೇಲ್ಭಾಗದ ಲಗೇಜ್ ಇಡುವ ಜಾಗದಲ್ಲಿ ಇರಿಸಿದ್ದರು.

ಲಾಡ್ಜ್‌ನಲ್ಲಿ ಚೆಕ್‌ ಮಾಡಿದಾಗ ಆಘಾತ

ಮುಂಜಾನೆ 5 ಗಂಟೆಗೆ ಬಸ್ ಭದ್ರಾವತಿ ತಲುಪಿದಾಗ ಬ್ಯಾಗ್ ಸುರಕ್ಷಿತವಾಗಿತ್ತು. ಆದರೆ, ಬೆಳಿಗ್ಗೆ 7 ಗಂಟೆಗೆ ತೀರ್ಥಹಳ್ಳಿಗೆ ಬಂದು, ಅಲ್ಲಿನ ಲಾಡ್ಜ್‌ ಒಂದರಲ್ಲಿ ರೂಂ ಪಡೆದು ಬ್ಯಾಗ್ ಪರಿಶೀಲಿಸಿದಾಗ ಒಳಗೆ ಸಣ್ಣ ಬಾಕ್ಸ್‌ಗಳಲ್ಲಿ ಇಟ್ಟಿದ್ದ ಒಟ್ಟು 254 ಗ್ರಾಂ 430 ಮಿಲಿ ತೂಕದ ವಿವಿಧ ಚಿನ್ನಾಭರಣಗಳು ನಾಪತ್ತೆಯಾಗಿದ್ದವು. ಬ್ಯಾಗ್‌ನ ಜಿಪ್ ಹಾಗೂ ಬೀಗಕ್ಕೆ ಯಾವುದೇ ಹಾನಿಯಾಗದಂತೆ ಕಳ್ಳರು ಆಭರಣಗಳನ್ನು ಮಾತ್ರ ಕದ್ದೊಯ್ದಿದ್ದಾರೆ ಎಂದು ಆರೋಪಿಸಲಾಗಿದೆ.

ಬೆಂಗಳೂರಿಗೆ ಹೋಗಿ ಪರಿಶೀಲಿಸಿದ್ದರು

ಚಿನ್ನಾಭರಣಗಳು ಬೆಂಗಳೂರಿನ ಅಂಗಡಿಯಲ್ಲೇ ಬಿಟ್ಟು ಬಂದಿರಬಹುದು ಎಂಬ ಅನುಮಾನದಿಂದ ಕಲೈವನನ್ ಅವರು ವಾಪಸ್ ಹೋಗಿ ಹುಡುಕಾಡಿದ್ದಾರೆ. ಅಲ್ಲಿ ಸಿಗದಿದ್ದಾಗ, ಪರಿಚಯಸ್ಥರೊಂದಿಗೆ ಚರ್ಚಿಸಿ ಜೂನ್ 26ರಂದು ತಡವಾಗಿ ತೀರ್ಥಹಳ್ಳಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ.

ಕಾಣೆಯಾದ ಒಡವೆಗಳಲ್ಲಿ ಚಿನ್ನದ ಮಾವಿನಕಾಯಿ ಸರ, ಓಲೆ, ಜುಮುಕಿ, ಉಂಗುರಗಳು ಹಾಗೂ ಮುತ್ತಿನ ಸರಗಳು ಸೇರಿವೆ. ತೀರ್ಥಹಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಶಿವಮೊಗ್ಗ JNNCE ಕಾಲೇಜಿನಲ್ಲಿ ADMISSION ಶುರು
JNNCE College Admission 2026
📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

ಶಿವಮೊಗ್ಗ ಲೈವ್ ಅಪ್ಡೇಟ್ಸ್

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಸೇರಿರಿ!