ಶಿವಮೊಗ್ಗ ಲೈವ್.ಕಾಂ | ತೀರ್ಥಹಳ್ಳಿ | 10 ಆಗಸ್ಟ್ 2019
ಸತತ ಮಳೆಯಿಂದಾಗಿ ತೀರ್ಥಹಳ್ಳಿ ತಾಲೂನಲ್ಲಿ ಭಾರಿ ಹಾನಿ ಸಂಭವಿಸಿದೆ. ಸೇತುವೆಗಳು ಕುಸಿದು ಬಿದ್ದಿವೆ. ರಸ್ತೆ ಸಂಪರ್ಕ ಕಡಿತವಾಗಿದೆ. ಮನೆಗಳಿಗೆ ನೀರು ನುಗ್ಗಿದೆ. ಹಲವು ಕಡೆ ಮನೆಗಳು ಕುಸಿದು ಬಿದ್ದಿವೆ. ಇದರಿಂದ ಜನಜೀವನ ಅಸ್ತವ್ಯಸ್ತವಾಗಿದೆ.
ಮೂರನೆ ದಿನವು ರಾಮ ಮಂಟಪದ ಮೇಲೆ ನೀರು
ಭಾರಿ ಮಳೆಗೆ ತುಂಗಾ ನದಿ ತುಂಬಿ ಹರಿಯುತ್ತಿದೆ. ರಾಮ ಮಂಟಪದ ಮೇಲೆ ಸುಮಾರು ಮೂರು ಅಡಿಯಷ್ಟು ನೀರು ಹರಿಯುತ್ತಿದೆ. ಕ್ಷಣ ಕ್ಷಣಕ್ಕು ತುಂಗಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗುತ್ತಿದೆ. ಇದರಿಂದ ಜನರು ಆತಂಕಕ್ಕೀಡಾಗಿದ್ದಾರೆ.
ಮಾಲತಿ ನದಿ ಉಕ್ಕಿ ಹರಿಯುತ್ತಿದ್ದು ಆಗುಂಬೆ ಭಾಗದಲ್ಲಿ ಅಡಕೆ ತೋಟಗಳು, ಗದ್ದೆಗೆ ನೀರು ನುಗ್ಗಿದೆ. ಇದರಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ.
ಮನೆ ಕುಸಿತ, ಸೇತುವೆ ನಾಶ
ಕನ್ನಂಗಿ ಸಮೀಪದ ಅತ್ತಿಗದ್ದೆಯ ನಿರ್ಮಲಮ್ಮ ಎಂಬುವವರಿಗೆ ಸೇರಿದ 8 ಜಾನುವಾರುಗಳು, ಗೀತಾ ಎಂಬುವವರ 5 ಜಾನುವಾರುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಇನ್ನು, ಅತ್ತಿಗದ್ದೆ ಸೇತುವೆ ಕುಸಿದಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಕೆಲವು ಕಡೆಗೆ ಮನೆ ಮತ್ತು ಗೋಡೆ ಕುಸಿತದ ವರದಿಯಾಗಿದೆ.

ಜಲಾವೃತ ಗ್ರಾಮಗಳಿಂದ ಜನರ ರಕ್ಷಣೆ
ಕುಂಟೇಹಳ್ಳ ಉಕ್ಕಿ ಹರಿದು ಕನ್ನಂಗಿ ಸಮೀಪದ ನವಿಲಾರಿ ಗ್ರಾಮ ಜಲಾವೃತಗೊಂಡಿತ್ತು. 20 ಕುಟುಂಬಗಳು ಶುಕ್ರವಾರದಿಂದ ನೀರಿನಲ್ಲಿ ಸಿಲುಕಿದ್ದರು. ಅಗ್ನಿಶಾಮಕ ಸಿಬ್ಬಂದಿ ಇವತ್ತು ಕಾರ್ಯಾಚರಣೆ ನಡೆಸಿ, ಬೋಟ್’ಗಳ ಮೂಲಕ ಜನರನ್ನು ರಕ್ಷಿಸಿದ್ದಾರೆ.
ಮಹಿಷಿ ಸೇತುವೆ ಜಲಾವೃತವಾಗಿದ್ದು, ಉತ್ತರಾಧಿ ಮಠ ಜಲಾವೃತವಾಗಿತ್ತು. ಮಠದಲ್ಲಿದ್ದ ಹತ್ತು ಜನರನ್ನು ಎನ್.ಡಿ.ಆರ್.ಎಫ್ ತಂಡ ರಕ್ಷಣೆ ಮಾಡಿದೆ.
ಕುಶಾವತಿ ನದಿ ತುಂಬಿ ಹರಿಯುತ್ತಿರುವುದರಿಂದ ಇಂದಾವರ, ಕೊರೋಡಿ, ನಾಡ್ತಿ ಗ್ರಾಮಗಳು ಸುತ್ತಲು ನೀರು ಆವರಿಸಿದ್ದು, ದ್ವೀಪದಂತಾಗಿದೆ. ಎನ್.ಡಿ.ಆರ್.ಎಫ್ ತಂಡದ ಅಧಿಕಾರಿಗಳು ಗ್ರಾಮಸ್ಥರ ರಕ್ಷಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ರವಾನಿಸಿದ್ದಾರೆ.
ತೀರ್ಥಹಳ್ಳಿಯ ಶ್ರೀ ರಾಮೇಶ್ವರ ಸಭಾ ಭವನದಲ್ಲಿ ಗಂಜಿ ಕೇಂದ್ರ ಸ್ಥಾಪಿಸಲಾಗಿದೆ. ಈವರೆಗೆ ಸುಮಾರು 70 ಜನರನ್ನು ಗಂಜಿ ಕೇಂದ್ರದಲ್ಲಿ ವ್ಯವಸ್ಥೆ ಮಾಡಲಾಗಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200