ಶಿವಮೊಗ್ಗ ಲೈವ್.ಕಾಂ | SHIMOGA | 10 ಫೆಬ್ರವರಿ 2020

ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಏಳು ದಿನದ ಮಗುವಿಗಾಗಿ ಶಿವಮೊಗ್ಗ ಪೊಲೀಸರು ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಿ ಜನ ಮೆಚ್ಚುಗೆ ಗಳಿಸಿದ್ದಾರೆ. ಇವತ್ತು ಬೆಳಗ್ಗೆ ಆಂಬುಲೆನ್ಸ್’ನಲ್ಲಿ ಮಗುವನ್ನು ಬೆಂಗಳೂರಿಗೆ ಕರೆದೊಯ್ಯುವ ವೇಳೆ ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು.
ಹೊನ್ನಾಳಿ ತಾಲೂಕು ಬೇಲಿಮಲ್ಲೂರು ಗ್ರಾಮದ ಸ್ವಾಮಿ ಮತ್ತು ಸುಧಾ ದಂಪತಿಗೆ ಏಳು ದಿನದ ಹಿಂದೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮಗು ಜನಿಸಿತ್ತು. ಸ್ಕ್ಯಾನಿಂಗ್ ವೇಳೆ, ಮಗುವಿಗೆ ಹೃದಯ ಸಂಬಂಧಿ ಸಮಸ್ಯೆ ಇರುವುದು ಗೊತ್ತಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಕರೆದೊಯ್ಯಬೇಕು ಎಂದು ವೈದ್ಯರು ಸೂಚಿಸಿದ್ದರು.
ಶಿವಮೊಗ್ಗದಿಂದ ಜೀರೋ ಟ್ರಾಫಿಕ್
ಮಗುವನ್ನು ತುರ್ತಾಗಿ ಬೆಂಗಳೂರಿಗೆ ಕರೆದೊಯ್ಯಬೇಕಿದೆ. ಹಾಗಾಗಿ ಆಂಬುಲೆನ್ಸ್’ಗೆ ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡುವಂತೆ ಮಗುವಿನ ಪೋಷಕರು ಶಿವಮೊಗ್ಗ ಪೊಲೀಸರಿಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇವತ್ತು ಬೆಳಗ್ಗೆ ಶಿವಮೊಗ್ಗ ಪೊಲೀಸರು ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದರು.
ಬೆಳಗ್ಗೆ ಮೆಗ್ಗಾನ್ ಆಸ್ಪತ್ರೆಯಿಂದ ಮಗುವನ್ನು ಹೊತ್ತ ಆಂಬುಲೆನ್ಸ್ ಹೊರಡುತ್ತಿದ್ದಂತೆ, ರಸ್ತೆಯಲ್ಲಿ ಇತರೆ ವಾಹನ ಸಂಚಾರವನ್ನು ಬಂದ್ ಮಾಡಲಾಯಿತು. ಆಂಬುಲೆನ್ಸ್ ಮುಂದೆ ಎಸ್ಕಾರ್ಟ್ ಜೀಪ್ ನಿಯೋಜಿಸಲಾಗಿತ್ತು. ಶಿವಮೊಗ್ಗ ಜಿಲ್ಲೆಯ ಗಡಿವರೆಗೂ ಶಿವಮೊಗ್ಗ ಪೊಲೀಸ್ ವಾಹನದ ಎಸ್ಕಾರ್ಟ್ ಒದಗಿಸಲಾಗಿದೆ. ಅಲ್ಲಿಂದ ಮುಂದಕ್ಕೂ ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿದ್ದು, ಆಯಾ ಜಿಲ್ಲೆಯ ಪೊಲೀಸ್ ವಾಹನ ಎಸ್ಕಾರ್ಟ್ ನೀಡಲಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]