ಶಿವಮೊಗ್ಗ ಲೈವ್.ಕಾಂ | SHIMOGA NEWS | 12 ಅಕ್ಟೋಬರ್ 2020
ಸಿಟಿ ಸೆಂಟರ್ ಮಾಲ್ ನಿರ್ಮಾಣಕ್ಕೆ ದಶಕದ ಹಿಂದೆ ಸ್ಥಳಾಂತರವಾಗಿದ್ದ ಹೂವಿನ ಮಾರುಕಟ್ಟೆಗೆ ಮತ್ತೊಮ್ಮೆ ಸ್ಥಳಾಂತರದ ಭೀತಿ ಎದುರಾಗಿದೆ. ಇದು ಹೂವು ಮಾರಾಟಗಾರರಲ್ಲಿ ಆತಂಕ ಹುಟ್ಟಿಸಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
VIDEO REPORT
ಮಹಾನಗರ ಪಾಲಿಕೆ ಕಾಂಪೌಂಡ್ ಮತ್ತು ಬಿ.ಹೆಚ್.ರಸ್ತೆಗೆ ಹೊಂದಿಕೊಂಡಂತೆ ಶಿವಪ್ಪನಾಯಕ ಹೂವಿನ ಮಾರುಕಟ್ಟೆ ಇದೆ. ವಿಶಾಲವಾದ 118 ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಹೂವು, ತರಕಾರಿ, ಪೂಜಾ ಸಾಮಾಗ್ರಿಗಳ ಅಂಗಡಿಗಳು ಇಲ್ಲಿವೆ. ಆದರೆ ಈ ಮಾರುಕಟ್ಟೆಯನ್ನು ಸ್ಥಳಾಂತರ ಮಾಡಲು ಯೋಜಿಸಲಾಗಿದೆ.
ಸ್ಥಳಾಂತರಕ್ಕೆ ಕಾರಣ ಏನು?
ಶಿವಪ್ಪನಾಯಕ ಹೂವಿನ ಮಾರುಕಟ್ಟೆ ಇರುವ ಜಾಗದಲ್ಲಿ ಮಲ್ಟಿ ಲೆವೆಲ್ ಪಾರ್ಕಿಂಗ್ ಕಟ್ಟಡ ನಿರ್ಮಿಸಲಾಗುತ್ತಿದೆ. ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಈ ಕಟ್ಟಡ ನಿರ್ಮಾಣಕ್ಕೆ ಯೋಜಿಸಲಾಗಿದೆ. ಈಗಾಗಲೇ ಪ್ಲಾನ್ ಸಿದ್ಧವಾಗಿದೆ. ಹಾಗಾಗಿ ಹೂವಿನ ಮಾರುಕಟ್ಟೆಯ ಸ್ಥಳಾಂತರಕ್ಕೆ ಸೂಚಿಸಲಾಗಿದೆ.
ಎಲ್ಲಿಗೆ ಸ್ಥಳಾಂತರವಾಗುತ್ತೆ ಮಾರುಕಟ್ಟೆ?
ಹೂವಿನ ಮಾರುಕಟ್ಟೆಯನ್ನು ಖಾಸಗಿ ಬಸ್ ನಿಲ್ದಾಣದ ಆವರಣಕ್ಕೆ ಸ್ಥಳಾಂತರ ಮಾಡಲು ಯೋಜಿಸಲಾಗಿದೆ. ಇಲ್ಲಿನ ವಾಹನ ಪಾರ್ಕಿಂಗ್ ಜಾಗದಲ್ಲಿ ತಾತ್ಕಾಲಿಕವಾಗಿ 6X6 ಅಡಿಯ ಮಳಿಗೆ ನಿರ್ಮಿಸಲಾಗುತ್ತಿದೆ. ಎಲ್ಲಾ ವ್ಯಾಪಾರಿಗಳಿಗೂ ಇಲ್ಲಿಯೆ ಅವಕಾಶ ಕಲ್ಪಿಸಲಾಗುತ್ತಿದೆ. ಖಾಸಗಿ ಬಸ್ ನಿಲ್ದಾಣ ಮತ್ತು ಮಿಳಘಟ್ಟ ಕಡೆಯಿಂದ ನೂತನ ಹೂವಿನ ಮಾರುಕಟ್ಟೆಗೆ ಪ್ರವೇಶಿಸಬಹುದಾಗಿದೆ. ಅಂಗಡಿಗಳು ಸಣ್ಣದಾಗಿದ್ದು, ಹೂವು ವ್ಯಾಪಾರ ಬಲು ಕಷ್ಟ ಅನ್ನುವುದು ವ್ಯಾಪಾರಿಗಳ ಅಳಲು.
ಒಪ್ಪಂದ ಆದರಷ್ಟೇ ಸ್ಥಳಾಂತರ
2008ರಲ್ಲಿ ಸಿಟಿ ಸೆಂಟರ್ ಮಾಲ್ ನಿರ್ಮಾಣಕ್ಕಾಗಿ ಮಾರುಕಟ್ಟೆಯ ಹಳೆಯ ಕಟ್ಟಡ ಕೆಡವಲಾಯಿತು. ಆಗ ಅಲ್ಲಿದ್ದ ಹೂವಿನ ಮಾರುಕಟ್ಟೆಯನ್ನು, ಈಗ ಇರುವ ಜಾಗಕ್ಕೆ ಸ್ಥಳಾಂತರ ಮಾಡಲಾಗಿತ್ತು. ಆರಂಭದಲ್ಲಿ ಇದು ತಾತ್ಕಾಲಿಕ ಸ್ಥಳಾಂತರ ಎಂದು ಭರವಸೆ ನೀಡಲಾಗಿತ್ತು. ನೂತನ ಕಟ್ಟಡ ನಿರ್ಮಾಣದ ಬಳಿಕ, ಎಲ್ಲಾ ವ್ಯಾಪಾರಿಗಳಿಗೂ ಆ ಕಟ್ಟಡದಲ್ಲೇ ಮಳಿಗೆ ನೀಡಲಾಗುತ್ತದೆ ಎಂದು ನಂಬಿಸಲಾಗಿತ್ತು. ಆದರೆ ಭರವಸೆ ಹಾಗೆ ಉಳಿಯಿತು. ಇದೇ ಕಾರಣಕ್ಕೆ ಮಲ್ಟಿ ಲೆವೆಲ್ ಪಾರ್ಕಿಂಗ್ ಕಟ್ಟಡದಲ್ಲಿ ಹೂವಿನ ಮಾರುಕಟ್ಟೆ ನಿರ್ಮಿಸಿ, ಈಗಿರುವ ಎಲ್ಲಾ ವ್ಯಾಪಾರಿಗಳಿಗೂ ಮಳಿಗೆ ನೀಡಬೇಕು. ಈ ಒಪ್ಪಂದಕ್ಕೆ ಸಹಿ ಹಾಕಿದರಷ್ಟೇ ಮಳಿಗೆಗಳನ್ನು ಖಾಲಿ ಮಾಡುವುದಾಗಿ ವ್ಯಾಪಾರಿಗಳು ತಿಳಿಸಿದ್ದಾರೆ.
ಹೇಗಿರುತ್ತೆ ಮಲ್ಟಿ ಲೆವೆಲ್ ಪಾರ್ಕಿಂಗ್?
ಶಿವಪ್ಪನಾಯಕ ಹೂವಿನ ಮಾರುಕಟ್ಟೆ ಇರುವ ಜಾಗದಲ್ಲಿ 34 ಕೋಟಿ ರೂ. ವೆಚ್ಚದಲ್ಲಿ ಮಲ್ಟಿ ಲೆವೆಲ್ ಪಾರ್ಕಿಂಗ್ ಕಟ್ಟಡ ನಿರ್ಮಿಸಲಾಗುತ್ತಿದೆ. ನೆಹರೂ ರಸ್ತೆ, ಗಾಂಧಿ ಬಜಾರ್, ಬಿ.ಹೆಚ್.ರಸ್ತೆಯಲ್ಲಿ ಪಾರ್ಕಿಂಗ್ ಹೊರೆ ತಗ್ಗಿಸಲು ಬೆಂಗಳೂರಿನಲ್ಲಿ ಇರುವಂತೆ ಮಲ್ಟಿ ಲೆವೆಲ್ ಪಾರ್ಕಿಂಗ್ ಕಟ್ಟಡ ನಿರ್ಮಿಸಲಾಗುತ್ತಿದೆ.
ಪದೇ ಪದೇ ಮಾರುಕಟ್ಟೆ ಸ್ಥಳಾಂತರದಿಂದ ಹೂವಿನ ವ್ಯಾಪಾರಕ್ಕೆ ಪೆಟ್ಟು ಬೀಳುತ್ತಿದೆ. ಈಗ ಬಸ್ ನಿಲ್ದಾಣದ ಆವರಣಕ್ಕೆ ಮಾರುಕಟ್ಟೆ ಸ್ಥಳಾಂತರವಾದರೆ ಹೂವಿನ ಬಿಸ್ನೆಸ್ ಸಂಪೂರ್ಣ ಕುಸಿತ ಕಾಣಲಿದೆ. ಹಾಗಾಗಿ ಕಟ್ಟಡ ನಿರ್ಮಾಣದ ಬಳಿಕ ಇಲ್ಲಿಯೇ ಮಳಿಗೆ ನೀಡಬೇಕು ಎಂದು ಹೂವಿನ ವ್ಯಾಪಾರಿಗಳ ಪಟ್ಟು ಹಿಡಿದಿದ್ದಾರೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]