ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 13 ಮಾರ್ಚ್ 2022
ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ (MDF) ಸಂಸ್ಥೆಯಲ್ಲಿ ಆಂತರಿಕ ಕಲಹ ತಾರಕಕ್ಕೇರಿದೆ. ಸರ್ವ ಸದಸ್ಯರ ಸಭೆಯಲ್ಲಿ ಎರಡು ಗುಂಪುಗಳು ಕೈ ಕೈ ಮಿಲಾಯಿಸಿವೆ. ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ನಡೆದ ಪೈಪೋಟಿ ಕಲಹಕ್ಕೆ ಕಾರಣವಾಗಿದೆ. ಶಿವಮೊಗ್ಗ ಹಾಲು ಒಕ್ಕೂಟದ ಅಧ್ಯಕ್ಷ, MDF ಸಂಸ್ಥೆಯ ಉಪಾಧ್ಯಕ್ಷರಾಗಿದ್ದ ಶ್ರೀಪಾದ ಹೆಗಡೆ ನಿಸರಾಣಿ ಸೇರಿ ಇಬ್ಬರ ಮೇಲೆ ಹಲ್ಲೆ ನಡೆಸಲಾಗಿದೆ.
ಸಾಗರದ ದೇವರಾಜ ಅರಸು ಕಲಾಭವನದಲ್ಲಿ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ ಸಂಸ್ಥೆಯ 56ನೇ ಸರ್ವ ಸದಸ್ಯರ ಸಭೆ ಆಯೋಜಿಸಲಾಗಿತ್ತು. ಈ ವೇಳೆ ಮಾತಿನ ಚಕಮಕಿ ನಡೆದು, ಎರಡು ಗುಂಪುಗಳ ಕೈ ಕೈ ಮಿಲಾಯಿಸಿವೆ.
ಅಧ್ಯಕ್ಷರ ಆಯ್ಕೆ ಬೆನ್ನಿಗೆ ಗಲಾಟೆ
MDF ಸಂಸ್ಥೆಯ ಹಿಂದಿನ ಅಧ್ಯಕ್ಷ ಕೆ.ಹೆಚ್.ಶ್ರೀನಿವಾಸ್ ಅವರು ಹರನಾಥರಾವ್ ಮತ್ತಿಕೊಪ್ಪ ಅವರನ್ನು ನೂತನ ಅಧ್ಯಕ್ಷ ಎಂದು ಘೋಷಿಸಿದರು. ಇದು ಕೆಲವರ ಅಸಮಾಧಾನಕ್ಕೆ ಕಾರಣವಾಯಿತು.
ಪ್ರತ್ಯೇಕ ಸಭೆಯಲ್ಲಿ ಮತ್ತೊಬ್ಬ ಅಧ್ಯಕ್ಷ
ಈ ಬೆಳವಣಿಗೆ ಬೆನ್ನಿಗೆ ದಳವಾಯಿ ದಾನಪ್ಪ ಅವರ ಅಧ್ಯಕ್ಷತೆಯಲ್ಲಿ MDFನ ಪ್ರತ್ಯೇಕ ವಾರ್ಷಿಕ ಸಭೆ ನಡೆಸಲಾಯಿತು. ಉಪಾಧ್ಯಕ್ಷರಾಗಿದ್ದ ಶ್ರೀಪಾದ ಹೆಗಡೆ ನಿಸರಾಣಿ ಅವರನ್ನು ನೂತನ ಅಧ್ಯಕ್ಷ ಎಂದು ಘೋಷಿಸಲಾಯಿತು.
‘ಶಾಸಕರು ಬಂದಿದ್ದೇಕೆ?’
ಇವತ್ತು ನೂತನ ಅಧ್ಯಕ್ಷರ ಅಧಿಕಾರ ಹಸ್ತಾಂತರ ಸಂದರ್ಭ ಶಾಸಕ ಹರತಾಳು ಹಾಲಪ್ಪ ಅವರು ಸಭೆಗೆ ಆಗಮಿಸಿದರು. ನೂತನ ಅಧ್ಯಕ್ಷ ಹರನಾಥರಾವ್ ಮತ್ತಿಕೊಪ್ಪ ಅವರಿಗೆ ಅಭಿನಂದನೆ ಸಲ್ಲಿಸಿದರು. ಈ ವೇಳೆ ಶ್ರೀಪಾದ ಹೆಗಡೆ ನಿಸರಾಣಿ ಅವರನ್ನು ಅಧ್ಯಕ್ಷ ಎಂದು ಮತ್ತೊಂದು ಗುಂಪು ಅಭಿನಂದನೆ ಸಲ್ಲಿಸಿತು. ಇದರಿಂದ ಗೊಂದಲ ಸೃಷ್ಟಿಯಾಯಿತು. ಪ್ರತಿಭಟನೆ ನಡೆದು ಘೋಷಣೆ ಕೂಗಲಾಯಿತು. ಎರಡು ಗುಂಪಿನ ಮಧ್ಯೆ ಮಾತಿನ ಚಕಮಕಿ ನಡೆಯಿತು.
ರೆಸಲ್ಯೂಷನ್ ಪುಸ್ತಕಕ್ಕಾಗಿ ಕಿತ್ತಾಟ
ಎರಡು ಗುಂಪುಗಳ ಮಧ್ಯೆ ರೆಸಲ್ಯೂಷನ್ ಪುಸ್ತಕಕ್ಕಾಗಿ ಕಿತ್ತಾಟ ಆರಂಭವಾಯಿತು. ನೂಕಾಟ ತಾಳಾಟದ ನಡುವೆ ಎರಡು ಗುಂಪುಗಳು ಕೈ ಕೈ ಮಿಲಾಯಿಸಿದವು. ಕೆಲವು ಕ್ಷಣ ಸಭಾಂಗಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. MDF ಕಾರ್ಯದರ್ಶಿ ಜಗದೀಶ್ ಗೌಡ ಮತ್ತು ಶ್ರೀಪಾದ ಹೆಗಡೆ ನಿಸರಾಣಿ ಅವರ ಮೇಲೆ ಹಲ್ಲೆ ನಡೆಸಲಾಯಿತು.
ಇಬ್ಬರು ಆಸ್ಪತ್ರೆಗೆ ದಾಖಲು
ಹಲ್ಲೆ ಆರೋಪದ ಹಿನ್ನೆಲೆಯಲ್ಲಿ ಶ್ರೀಪಾದ ಹೆಗಡೆ ನಿಸರಾಣಿ ಮತ್ತು ಜಗದೀಶ ಗೌಡ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ತಮ್ಮ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಗೊಂದಲದ ಗೂಡಾಯ್ತು ಪ್ರತಿಷ್ಠಿತ ಸಂಸ್ಥೆ
ಮಲೆನಾಡು ಭಾಗದಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ ಪ್ರಮುಖ ಪಾತ್ರ ವಹಿಸಿದೆ. ಎಲ್.ಬಿ ಮತ್ತು ಎಸ್.ಬಿ.ಎಸ್ ಕಾಲೇಜು ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳು MDF ಸಂಸ್ಥೆಯ ಅಡಿಯಲ್ಲಿದೆ. ಶಿಕ್ಷಣ ವ್ಯಾಪಾರಿಕರಣ ಆಗಬಾರದು ಎಂಬುದು ಈ ಸಂಸ್ಥೆಯ ನಿಲುವು. ಇಲ್ಲಿ ಓದಿದ ಗ್ರಾಮೀಣ ಭಾಗದ ಸಾವಿರಾರು ವಿದ್ಯಾರ್ಥಿಗಳು ದೊಡ್ಡ ಹುದ್ದೆಗಳನ್ನು ಪಡೆದು, ದೇಶ, ವಿದೇಶದಲ್ಲಿ ನೆಲ್ಲಿಸಿದ್ದಾರೆ.
ಹಲವು ಪ್ರಮುಖ ಸಾಹಿತಿಗಳು, ಶಿಕ್ಷಣ ತಜ್ಞರು MDFನ ಶೈಕ್ಷಣಿಕ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದ್ದ MDF ಸಂಸ್ಥೆಯಲ್ಲಿ ಇತ್ತೀಚೆಗೆ ಹಲವು ಅಪಸ್ವರ ಕೇಳಿ ಬಂದಿದ್ದವು. ಉಪನ್ಯಾಸಕರ ನೇಮಕಾತಿ ವಿಚಾರ, ಆಡಳಿತದ ವಿಚಾರವಾಗಿ ಗೊಂದಲ ಸೃಷ್ಟಿಯಾಗಿತ್ತು. ಸಾರ್ವಜನಿಕ ವಲಯದಲ್ಲಿಯು ಇದು ಚರ್ಚೆಗೆ ಕಾರಣವಾಗಿತ್ತು. ಈಗ ಅಧ್ಯಕ್ಷ ಹುದ್ದೆಗಾಗಿ ನಡೆದ ಪೈಪೋಟಿ, ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿರುವುದು ಸಂಸ್ಥೆಯ ಗೌರವಕ್ಕೆ ಚ್ಯುತಿ ತಂದಿದೆ.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422