SHIVAMOGGA LIVE NEWS | 23 JANUARY 2023
SHIMOGA | OLXನಲ್ಲಿ ಪ್ರಕಟವಾಗಿದ್ದ ಜಾಹೀರಾತು (advertisement) ಗಮನಿಸಿ ಕಾರು ಖರೀದಿಗೆ ಮುಂದಾದ ಬ್ಯಾಂಕ್ ಉದ್ಯೋಗಿಯೊಬ್ಬರಿಗೆ 3.70 ಲಕ್ಷ ರೂ. ವಂಚಿಸಲಾಗಿದೆ. ಕಾರು ಸಿಗದೆ, ಹಣವು ವಾಪಸ್ ಬಾರದೆ ಸಂಕಷ್ಟಕ್ಕೀಡಾದ ಬ್ಯಾಂಕ್ ಉದ್ಯೋಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕಾರಿಗಾಗಿ OLXನಲ್ಲಿ ಹುಡುಕಾಟ
ಶಿವಮೊಗ್ಗದ ಬ್ಯಾಂಕ್ ಉದ್ಯೋಗಿಯೊಬ್ಬರು (ಹೆಸರು ಗೌಪ್ಯ) ಕಾರು ಖರೀದಿಗಾಗಿ OLXನಲ್ಲಿ ಹುಡುಕಾಟ ನಡೆಸಿದರು. ದೆಹಲಿಯಲ್ಲಿ 2017ರ ಮಾಡಲ್ ಕ್ರೆಟಾ ಕಾರು ಮಾರಾಟಕ್ಕಿದೆ ಎಂಬ ಜಾಹೀರಾತು (advertisement) ಪ್ರಕಟಿಸಲಾಗಿತ್ತು. ಅದರಲ್ಲಿದ್ದ ಮೊಬೈಲ್ ನಂಬರ್’ಗೆ ಸಂಪರ್ಕಿಸಿ ಕಾರು ಖರೀದಿಯ ಇಂಗಿತ ವ್ಯಕ್ತಪಡಿಸಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಅಡ್ವಾನ್ಸ್ ಹಣ ಪಾವತಿಸಿಕೊಂಡ
ಶಿವಮೊಗ್ಗದ ಬ್ಯಾಂಕ್ ಉದ್ಯೋಗಿಯೊಂದಿಗೆ ಮಾತನಾಡಿದ ವ್ಯಕ್ತಿ ತನ್ನನ್ನು ಆಯುಶ್ ಎಂದು ಪರಿಚಯಿಸಿಕೊಂಡಿದ್ದ. ಕಾರು ಖರೀದಿಯನ್ನು ಖಚಿತಪಡಿಸಿಕೊಳ್ಳಲು ಅಡ್ವಾನ್ಸ್ ಹಣ 6 ಸಾವಿರ ರೂ. ಹಾಕುವಂತೆ ತಿಳಿಸಿದ್ದ. ಶಿವಮೊಗ್ಗದ ಬ್ಯಾಂಕ್ ಉದ್ಯೋಗಿ ಇಂಟರ್ ನೆಟ್ ಬ್ಯಾಂಕಿಂಗ್ ಮೂಲಕ 6 ಸಾವಿರ ರೂ. ಅಡ್ವಾನ್ಸ್ ಹಣ ತಲುಪಿಸಿದ್ದರು.
ಇವತ್ತೆ ಕಾರು ಡಿಲೆವರಿ ಕೊಡ್ತೀವಿ
ಅಡ್ವಾನ್ಸ್ ಹಣ ಪಾವತಿ ಮಾಡಿದ ನಾಲ್ಕು ದಿನದ ಬಳಿಕ ದೆಹಲಿಯ ಆಯುಶ್ ಕರೆ ಮಾಡಿ, ಇವತ್ತೆ ಕಾರು ಡಿಲೆವರಿ ಕೊಡುತ್ತೀವಿ ಎಂದು ತಿಳಿಸಿದ್ದ. ‘ದೆಹಲಿಯ ಪಟೇಲ್ ನಗರದ ಮೆಟ್ರೋ ಪಿಲ್ಲರ್ 179ರ ಬಳಿ ಗ್ಯಾರೇಜಿನಲ್ಲಿ ಕಾರು ಸಿದ್ಧವಾಗಿದೆ. ಡಿಲೆವರಿ ಪಡೆಯಬಹುದು. ಬಾಕಿ ಹಣವನ್ನು ಈಗಲೇ ಕೊಡಬೇಕು’ ಎಂದು ಸೂಚಿಸಿದ್ದ. ಕಾರ್ ಡೀಲರ್ ಸೂಚಿಸಿದ ಅಕೌಂಟ್ ನಂಬರಿಗೆ ಶಿವಮೊಗ್ಗದ ಬ್ಯಾಂಕ್ ಉದ್ಯೋಗಿ 3.35 ಲಕ್ಷ ರೂ. ಬಾಕಿ ಹಣ ಆರ್.ಟಿ.ಜಿ.ಎಸ್ ಮೂಲಕ ಟ್ರಾನ್ಸ್ ಫರ್ ಮಾಡಿದ್ದಾರೆ.
ವರ್ಕ್ ಶಾಪಿನಿಂದ ಬಂತು ಶಾಕಿಂಗ್ ನ್ಯೂಸ್
ದೆಹಲಿಯ ಕಾರು ಡೀಲರ್ ಆಯುಶ್ ಹೇಳಿದ ವಿಳಾಸಕ್ಕೆ ಶಿವಮೊಗ್ಗದ ಬ್ಯಾಂಕ್ ಸಿಬ್ಬಂದಿ ದೆಹಲಿಯಲ್ಲಿರುವ ತನ್ನ ಬ್ಯಾಂಕ್ ಉದ್ಯೋಗಿಯನ್ನು ಕಳುಹಿಸಿದ್ದರು. ಕಾರು ವರ್ಕ್ ಶಾಪ್ ಬಳಿ ಹೋದ ಬ್ಯಾಂಕ್ ಉದ್ಯೋಗಿಗೆ ವರ್ಕ್ ಶಾಪಿನವರು ಕಾರು ಡಿಲೆವರಿ ಕೊಡಲು ನಿರಾಕರಿಸಿದ್ದಾರೆ. ‘ನೀವು ಕಳುಹಿಸಿದ ಹಣ ನಮಗೆ ತಲುಪಿಲ್ಲ. ಯಾರಿಗೆ ಹಣ ಹಾಕಿದ್ದೀರೋ ಅವರನ್ನೆ ಕೇಳಿಕೊಳ್ಳಿ’ ಎಂದು ತಿಳಿಸಿದ್ದಾರೆ.
ಈ ವಿಚಾರ ಗೊತ್ತಾಗುತ್ತಲೆ ಶಿವಮೊಗ್ಗದ ಬ್ಯಾಂಕ್ ಉದ್ಯೋಗಿ ದೆಹಲಿಯ ಕಾರ್ ಡೀಲರ್ ಆಯುಶ್ ಎಂಬಾತನ ಮೊಬೈಲ್ ನಂಬರಿಗೆ ಕರೆ ಮಾಡಿದ್ದಾರೆ. ಆದರೆ ಆತ ಕರೆ ಸ್ವೀಕರಿಸಲಿಲ್ಲ. ಕೂಡಲೆ ಅವರು ಹಣ ಹಾಕಿದ್ದ ಖಾತೆಯನ್ನು ಫ್ರೀಜ್ ಮಾಡಿಸಿದರು. ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದಾರೆ.
OLXನಲ್ಲಿ ಖರೀದಿ ವೇಳೆ ಜೋಕೆ
ಸಕೆಂಡ್ ಹ್ಯಾಂಡ್ ವಸ್ತುಗಳ ಮಾರಾಟಕ್ಕೆ OLX ಉತ್ತಮ ವೇದಿಕೆಯಾಗಿದೆ. ಆದರೆ OLXನಲ್ಲಿ ಯಾವುದೆ ವಸ್ತುಗಳ ಖರೀದಿ ವೇಳೆ ಮುನ್ನೆಚ್ಚರಿಕೆ ವಹಿಸಬೇಕಿದೆ. ವಸ್ತುಗಳನ್ನು ಮಾರಾಟಕ್ಕೆ ಇಟ್ಟಿರುವ ವ್ಯಕ್ತಿಯ ಕುರಿತು ಮಾಹಿತಿ ತಿಳಿದುಕೊಂಡು ವ್ಯವಹಾರ ಮುಂದುವರೆಸುವುದು ಸೂಕ್ತ. ಫೋನ್ ಮೂಲಕ ಮಾತುಕತೆ ನಡೆಸುವುದಕ್ಕಿಂತಲು ನೇರಾನೇರ ಭೇಟಿಯಾಗಿ ಮಾತನಾಡುವುದು ಸೂಕ್ತ. ಇದರಿಂದ ವಂಚಕರ ಜಾಲದಿಂದ ತಪ್ಪಿಸಿಕೊಳ್ಳಬಹುದಾಗಿದೆ.
ಇದನ್ನೂ ಓದಿ – ಬ್ಯಾಂಕಿನಲ್ಲಿ ಹಣ ಬಿಡಿಸಲು ಚೆಕ್ ನೀಡಿದ ಶಿವಮೊಗ್ಗದ ನೌಕರನಿಗೆ ಕಾದಿತ್ತ ಶಾಕ್, SMS ತಂದ ಸಂಕಷ್ಟ