ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 21 MAY 2023
SHIMOGA : ಬಡವರ ಹೊಟ್ಟೆ ತುಂಬಿಸುವ ಇಂದಿರಾ ಕ್ಯಾಂಟೀನ್‌ಗಳು ಪುನಃ ಚರ್ಚೆಗೆ ಬಂದಿವೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಿದ್ದಂತೆ ಇಂದಿರಾ ಕ್ಯಾಂಟೀನ್‌ಗಳಿಗೆ (Indira Canteen) ಜೀವ ಕಳೆ ತುಂಬುವ ಭರವಸೆ ನೀಡಿದ್ದಾರೆ. ಶಿವಮೊಗ್ಗದಲ್ಲಿಯು ನಾಲ್ಕು ಕ್ಯಾಂಟೀನ್‌ಗಳನ್ನು ಸ್ಥಾಪಿಸಲಾಗಿದೆ. ಯಾವ್ಯಾವ ಕ್ಯಾಂಟೀನ್ ಹೇಗಿದೆ? ಜನ ಬರುತ್ತಿದ್ದಾರೋ ಇಲ್ಲವೋ ಅನ್ನುವ ಗ್ರೌಂಡ್ ರಿಪೋರ್ಟ್ ಇಲ್ಲಿದೆ.
2018ರಲ್ಲಿ ಮೊದಲ ಕ್ಯಾಂಟೀನ್
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಇಂದಿರಾ ಕ್ಯಾಂಟೀನ್ ಯೋಜನೆ ಜಾರಿಗೊಳಿಸಿದರು. ಕಡಿಮೆ ದರದಲ್ಲಿ ಗುಣಮಟ್ಟದ ತಿಂಡಿ, ಊಟ ಒದಗಿಸುವುದು ಈ ಯೋಜನೆಯ ಉದ್ದೇಶ. ಐದು ರುಪಾಯಿಗೆ ತಿಂಡಿ, ಹತ್ತು ರುಪಾಯಿಗೆ ಊಟ ಹಲವು ಜನರನ್ನು ಆಕರ್ಷಿಸಿತ್ತು. 2017ರ ಆಗಸ್ಟ್ 15ರಂದು ಇಂದಿರಾ ಕ್ಯಾಂಟೀನ್‌ಗೆ (Indira Canteen) ಚಾಲನೆ ನೀಡಲಾಯಿತು. ಶಿವಮೊಗ್ಗ ಜಿಲ್ಲೆಯಲ್ಲಿ ಮೊದಲ ಇಂದಿರಾ ಕ್ಯಾಂಟೀನ್ ಆರಂಭವಾಗಿದ್ದು 2018ರ ಮಾರ್ಚ್ 13ರಂದು.
ಹೇಗಿತ್ತು ಮೊದಲ ಕ್ಯಾಂಟೀನ್?
ವಿನೋಬನಗರದ ಶಿವಾಲಯ ಸಮೀಪ ಶಿವಮೊಗ್ಗದ ಮೊದಲ ಇಂದಿರಾ ಕ್ಯಾಂಟೀನ್ ಆರಂಭಿಸಲಾಯಿತು. ಇಂದಿರಾ ಕ್ಯಾಂಟೀನ್‌ಗೆ ದೊಡ್ಡ ಸಂಖ್ಯೆಯ ಜನರು ಬರುತ್ತಿದ್ದರು. ಇದರ ಜನಪ್ರಿಯತೆ ಹೇಗಿತ್ತು ಅಂದರೆ ಕೆಲವೇ ನಿಮಿಷದಲ್ಲಿ ಟೋಕನ್‌ಗಳು ಖಾಲಿಯಾಗುತ್ತಿದ್ದವು. ಗುಣಮಟ್ಟದ ಆಹಾರ, ಉತ್ತಮ ವಾತಾವರಣ ಇದ್ದಿದ್ದರಿಂದ ಕಾರುಗಳಲ್ಲಿಯು ಜನ ಬಂದು ಇಲ್ಲಿ ಊಟ, ತಿಂಡಿ ಸವಿಯುತ್ತಿದ್ದರು. ಸರ್ಕಾರ ಬದಲಾದಂತೆ ಇಂದಿರಾ ಕ್ಯಾಂಟೀನ್‌ಗಳ ಸ್ಥಿತಿಯು ಬದಲಾಯಿತು.
ಈಗ ಹೇಗಿದೆ ಮೊದಲ ಕ್ಯಾಂಟೀನ್ ಸ್ಥಿತಿ?
ಜಿಲ್ಲೆಯ ಮೊದಲ ಇಂದಿರಾ ಕ್ಯಾಂಟೀನ್‌ಗೆ ಈಗ ಬೆರಳೆಣಿಕೆಯಷ್ಟು ಜನ ಬರುತ್ತಿದ್ದಾರೆ. ಬೆಳಗ್ಗೆ ತಿಂಡಿಗೆ ಇಡ್ಲಿ, ರೈಸ್ ಬಾತ್ ಇರಲಿದೆ. ಭಾನುವಾರ ಉಪ್ಪಿಟ್ಟು, ಕೇಸರಿ ಬಾತ್ ಸಿಗಲಿದೆ. ಮಧ್ಯಾಹ್ನ ಊಟಕ್ಕೆ ರೊಟ್ಟಿ, ಅನ್ನ, ಸಾಂಬಾರ್, ಪಲ್ಯ ಇರಲಿದೆ. ರಾತ್ರಿಯು ಇದೆ ಮಾದರಿ ಊಟ ಸಿಗುತ್ತಿದೆ.
ಪ್ರತಿದಿನ ಬೆಳಗ್ಗೆ 7.30ರಿಂದ 10 ಗಂಟೆವರೆಗೆ ತಿಂಡಿಯ ಸಮಯ. 5 ರುಪಾಯಿಗೆ ತಿಂಡಿ ಲಭ್ಯ. ಮಧ್ಯಾಹ್ನ 12.30 ರಿಂದ 3 ಗಂಟೆವರೆಗೆ ಊಟ, ರಾತ್ರಿ 7 ರಿಂದ 9 ಗಂಟೆವರೆಗೆ ಊಟ ಸಿಗಲಿದೆ. ರೊಟ್ಟಿ ಊಟಕ್ಕೆ 20 ರೂ., ಅನ್ನ ಸಾಂಬಾರ್‌ಗಾದರೆ 10 ರೂ.
ಪ್ರತಿ ದಿನ ಬೆಳಗ್ಗೆ ಸುಮಾರು 70 ಮಂದಿ ತಿಂಡಿಗೆ ಬರುತ್ತಾರೆ. ಮಧ್ಯಾಹ್ನ 60 ರಿಂದ 70 ಮಂದಿ ಊಟ ಮಾಡುತ್ತಾರೆ. ರಾತ್ರಿ ಹೆಚ್ಚೆಂದರೆ 20 ಮಂದಿ ಇಲ್ಲಿ ಊಟ ಮಾಡಿ ಹೋಗುತ್ತಾರೆ. ಮೊದಲೆಲ್ಲ ಟೋಕನ್ ವ್ಯವಸ್ಥೆ ಇತ್ತು. ಈಗ ಜನ ಕಡಿಮೆ ಆಗಿರುವುದರಿಂದ ಟೋಕನ್ ಇಲ್ಲ. ನೇರವಾಗಿ ಹಣ ಕೊಟ್ಟು, ಊಟ ಮಾಡಬೇಕಿದೆ.
ಪಾತ್ರೆಗಳು, ಕುಡಿಯುವ ನೀರು ಹಾಗೂ ಕ್ಯಾಂಟೀನ್ ಆವರಣದಲ್ಲಿ ಸ್ವಚ್ಛತೆ ಇದೆ. ಮೂರು ಮಹಿಳೆಯರು ಇಲ್ಲಿ ಪ್ರತ್ಯೇಕ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಜನರನ್ನು ಇನ್ನಷ್ಟು ಸೆಳೆಯಬೇಕಿದೆ
ಶಿವಮೊಗ್ಗ ನಗರದಲ್ಲಿ ನಾಲ್ಕು ಇಂದಿರಾ ಕ್ಯಾಂಟೀನ್‌ಗಳನ್ನು ಸ್ಥಾಪಿಸಲಾಗಿದೆ. ವಿನೋಬನಗರ ಶಿವಾಲಯ ಬಳಿ, ಆರ್‌ಎಂಸಿ ಒಳಾಂಗಣದಲ್ಲಿ, ಖಾಸಗಿ ಬಸ್ ನಿಲ್ದಾಣದ ಹಿಂಭಾಗ, ಮೀನಾಕ್ಷಿ ಭವನದಲ್ಲಿ ಡಿಡಿಪಿಐ ಕಚೇರಿ ಆವರಣದಲ್ಲಿ ಕ್ಯಾಂಟೀನ್‌ಗಳನ್ನು ಸ್ಥಾಪಿಸಲಾಗಿದೆ.
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ
ಎಲ್ಲೆಡೆಯು ಬೆರಳೆಣಿಕೆಯಷ್ಟು ಮಂದಿ ಮಾತ್ರ ಊಟ, ತಿಂಡಿಗೆ ಬರುತ್ತಿದ್ದಾರೆ. ಸರ್ಕಾರ ಬದಲಾದಂತೆ ಕ್ಯಾಂಟೀನ್‌ನಲ್ಲಿ ಆಹಾರದ ಗುಣಮಟ್ಟ, ಸ್ವಚ್ಛತೆ ಇರಲಿಲ್ಲ. ಇದೆ ಕಾರಣಕ್ಕೆ ಜನ ಇಂದಿರಾ ಕ್ಯಾಂಟೀನ್‌ಗಳಿಂದ ದೂರಾದರು. ಲಾಕ್‌ಡೌನ್ ಬಳಿಕ ಜನಪ್ರಿಯತೆ ಪೂರ್ಣ ಕುಸಿಯಿತು.
ಇದನ್ನೂ ಓದಿ – ತಾಳಗುಪ್ಪ – ಬೆಂಗಳೂರು ಇಂಟರ್ ಸಿಟಿ ರೈಲು ಮೇ 23ರಂದು ತುಮಕೂರಿನ ತನಕ ಮಾತ್ರ ಸಂಚರಿಸಲಿದೆ, ಇಲ್ಲಿದೆ ಕಾರಣ
ಕೆಲಸಗಾರರಿಗೆ ಸರಿಯಾದ ವೇತನವಿಲ್ಲ
ಶಿವಮೊಗ್ಗದ ಇಂದಿರಾ ಕ್ಯಾಂಟೀನ್‌ಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಸರಿಯಾದ ವೇತನ ಸಿಗುತ್ತಿಲ್ಲ. ಪ್ರತಿದಿನ ಕೂಲಿ ಎಂದು 200 ರೂ. ನೀಡಲಾಗುತ್ತದೆ. ಉಳಿದಂತೆ ಇಎಸ್‌ಐ, ಪಿಎಫ್ ಸೇರಿ ಬೇರಾವುದೆ ಸವಲತ್ತು ಸಿಗುತ್ತಿಲ್ಲ. ಸಿದ್ದರಾಮಯ್ಯ ಅವರು ಪುನಃ ಮುಖ್ಯಮಂತ್ರಿ ಆಗಿರುವುದರಿಂದ ಇಂದಿರಾ ಕ್ಯಾಂಟೀನ್‌ಗೆ ಹೊಸ ರೂಪ ನೀಡುವುದರ ಜೊತೆಗೆ, ತಮ್ಮ ಬದುಕಿಗೂ ಆಸರೆಯಾಗಬಲ್ಲರು ಎಂಬ ನಂಬಿಕೆ ಇಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರದ್ದು.
ಶಿವಮೊಗ್ಗದ ಇಂದಿರಾ ಕ್ಯಾಂಟೀನ್‌ಗಳಿಗೆ ಹೊಸ ರೂಪ ಕೊಡಬೇಕಿದೆ. ಇದರಿಂದ ಬಡವರು, ಕೂಲಿ ಕಾರ್ಮಿಕರು, ಸಣ್ಣ ಪುಟ್ಟ ವೇತನದ ಉದ್ಯೋಗದಲ್ಲಿರುವವರಿಗೆ ಹೊಟ್ಟೆ ತುಂಬ ಊಟ ಸಿಗಲು ಅನುಕೂಲವಾಗಲಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422