ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 15 FEBRUARY 2024
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
SHIMOGA : 2ಎ ಮೀಸಲಾತಿಗಾಗಿ ಆಗ್ರಹಿಸಿ ಪಂಚಮಸಾಲಿ, ಗೌಡ, ಮಲೆಗೌಡ, ದೀಕ್ಷೆ ಲಿಂಗಾಯಿತರು ಲಿಂಗಪೂಜೆ ಮಾಡಿ ಪ್ರತಿಭಟನೆ ನಡೆಸಿದರು. ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಗೋಪಿ ಸರ್ಕಲ್‌ನಲ್ಲಿ ಲಿಂಗ ಪೂಜೆ ನೆರವೇರಿಸಲಾಯಿತು.
ಇಷ್ಟಲಿಂಗ ಪೂಜೆ, ಮೆರವಣಿಗೆ, ಸಭೆ
ಶಿವಮೊಗ್ಗದ ವೀರಶೈವ ಕಲ್ಯಾಣ ಮಂದಿರ ಹಿಂಬದಿಯ ವೀರಭದ್ರೇಶ್ವರ ದೇವಸ್ಥಾನ ಚೌಕಿ ಮಠದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ನೆರವೇರಿಸಲಾಯಿತು. ನಂತರ ಶಿವಪ್ಪನಾಯಕ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಎಎ ಸರ್ಕಲ್, ನೆಹರೂ ರಸ್ತೆ ಮೂಲಕ ಗೋಪಿ ಸರ್ಕಲ್‌ವರೆಗೆ ಮೆರವಣಿಗೆ ನಡೆಸಲಾಯಿತು. ಗೋಪಿ ಸರ್ಕಲ್‌ನಲ್ಲಿ ಪ್ರತಿಭಟನಾ ಸಭೆ ನಡೆಸಲಾಯಿತು.
ಯಾರೆಲ್ಲ ಏನೇನು ಮಾತಾಡಿದರು?
ಗೋಪಿ ಸರ್ಕಲ್‌ನಲ್ಲಿ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ 2ಎ ಮೀಸಲಿಗಾಗಿ ಆಗ್ರಹಿಸಿ ಪ್ರಮುಖರು ಭಾಷಣ ಮಾಡಿದರು.
ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ : ಪಂಚಮಸಾಲಿ ಲಿಂಗಾಯತ ಸಮುದಾಯದ ಉಳಿವಿಗಾಗಿ ಹೋರಾಟ ನಡೆಸಲಾಗುತ್ತಿದೆಯೇ ಹೊರತು ಮುಖ್ಯಮಂತ್ರಿ ಗದ್ದುಗೆ ಏರಲು ಅಲ್ಲ. ಮೀಸಲಾತಿ ಹೋರಾಟ ಕೈಬಿಡುವಂತೆ ಸಮುದಾಯದ ಶ್ರೀಗಳಿಗೆ ಒತ್ತಡ ಹೇರಲಾಗಿದೆ. ಕೆಲವರು ಹೋರಾಟವನ್ನು ಹತ್ತಿಕ್ಕಲು ಆಮಿಷ ಕೂಡ ಒಡ್ಡಿದ್ದಾರೆ. ಆದರೆ ಹೋರಾಟವನ್ನು ಯಾವುದೇ ಕಾರಣಕ್ಕೂ ಕೈಬಿಡುವುದಿಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ 2ಡಿ ಪ್ರವರ್ಗದಡಿ ಶೇ.4ರಷ್ಟು ಮೀಸಲಾತಿ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ವಿಧಾನಸಭಾ ಚುನಾವಣೆ ಹಿನ್ನಲೆ ಅದು ಅನುಷ್ಠಾನಕ್ಕೆ ಬಂದಿಲ್ಲ. ಶ್ರೀಗಳು ಮೀಸಲಾತಿಗೆ ಆಗ್ರಹಿಸಿ ಹೋರಾಟ ನಡೆಸಲು ಕರೆ ನೀಡಿದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೇಡಿಕೆ ಈಡೇರಿಸಲು 15 ದಿನಗಳ ಕಾಲಾವಕಾಶ ಕೇಳಿದ್ದರು. 8 ತಿಂಗಳು ಕಳೆದರೂ ಸಮುದಾಯಕ್ಕೆ ಮೀಸಲಾತಿ ಮಾತ್ರ ಘೋಷಿಸಿಲ್ಲ.
ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ : ಹಲವು ಬಾರಿ ಹೋರಾಟ ಮಾಡಿದ್ದೇವೆ. ಮಠ ಬಿಟ್ಟು, ಸಮಾಜದ ಒಳಿತಿಗಾಗಿ ಹಳ್ಳಿಹಳ್ಳಿಗಳಿಗು ಸುತ್ತಿದ್ದೇನೆ. ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಹಳ್ಳಿಗಳಿಗೆ ಭೇಟಿ ನೀಡಿದ್ದೇನೆ. ಜನ ಉತ್ತಮವಾಗಿ ಸ್ಪಂದಿಸಿದ್ದಾರೆ. ನಮ್ಮ ಹೋರಾಟ ಯಾರ ವಿರುದ್ದವು ಅಲ್ಲ. ಸಮುದಾಯಕ್ಕೆ ಸಿಗಬೇಕಾದ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಮಾತ್ರ. ಭರವಸೆ ನೀಡಿದವರು ಮರೆತಿದ್ದಾರೆ. ಅವರನ್ನು ಎಚ್ಚರಿಸುವ ಕಾರ್ಯ ಮುಂದುವರೆಸುತ್ತೇವೆ. ನ್ಯಾಯ ಸಿಗುವವರೆಗೆ ಹೋರಾಟ ಕೈಬಿಡುವುದಿಲ್ಲ ಎಂದರು.
ಇದನ್ನೂ ಓದಿ – ‘ಅಲ್ಲಿ ನಮ್ಮಪ್ಪನ ಆಸ್ತಿ ಇಲ್ಲ’, ಆಯನೂರು ಮಂಜುನಾಥ್ ವಿರುದ್ಧ ರಾಘವೇಂದ್ರ ಗರಂ, ಇಲ್ಲಿದೆ 5 ಪ್ರಮುಖ ಪಾಯಿಂಟ್
ಮಲ್ಲಿಕಾರ್ಜುನ ಹಕ್ರೆ : ಪಂಚಮಸಾಲಿ ಮೀಸಲಾತಿಗೆ ಮೊದಲ ಯಶಸ್ಸು 2ಡಿ ಸಿಕ್ಕಿತ್ತು. ಆದರೆ ಅದು ಜಾರಿಗೆ ಬಂದಿಲ್ಲ. ನಮಗೆ ಬೇಕಿರುವುದು 2ಎ. ನಮ್ಮ ಬೇಡಿಕೆ ಈಡೇರುವವರೆಗು ಹೋರಾಟ ಮುಂದುವರೆಯುತ್ತದೆ ಎಂದರು.
ಪ್ರಮುಖರಾದ ಹೆಚ್.ವಿ. ಮಹೇಶ್ವರಪ್ಪ, ಶಿವಕುಮಾರ್, ಪ್ರೊ. ವಿಜಯ್‌ಕುಮಾರ್, ಅಜಯ್ ಕುಮಾರ್, ಬಸವನಗೌಡ್ರು, ರುದ್ರೇಗೌಡರು, ಸತೀಶ್, ಮಾಜಿ ಶಾಸಕ ಶಿವಶಂಕರ್ ಮತ್ತಿತರರು ಇದ್ದರು.