ಶಿವಮೊಗ್ಗ LIVE
ಫಟಾಫಟ್ ನ್ಯೂಸ್: ಶಿವಮೊಗ್ಗ ಜಿಲ್ಲೆಯಲ್ಲಿ ಏನೇನಾಯ್ತು? ಒಂದೇ ಕ್ಲಿಕ್‌ನಲ್ಲಿ ಪ್ರಮುಖ ಸುದ್ದಿಗಳು (top news).
ಹೊಸ ವರ್ಷಕ್ಕೆ ಸಂಭ್ರಮದ ಸ್ವಾಗತ
ಶಿವಮೊಗ್ಗ: ಜಿಲ್ಲೆಯಾದ್ಯಂತ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲಾಯಿತು. ಕ್ಲಬ್‌ಗಳು, ಹೋಂ ಸ್ಟೇ, ಹೊಟೇಲ್‌ಗಳಲ್ಲಿ ಕಾರ್ಯಕ್ರಮ, ಪಾರ್ಟಿಗಳನ್ನು ಆಯೋಜಿಸಲಾಗಿತ್ತು. ರಾತ್ರಿ 12 ಗಂಟೆಗೆ ಪಟಾಕಿಗಳನ್ನು ಸಿಡಿಸಿ 2025ಕ್ಕೆ ವಿದಾಯ ಹೇಳಲಾಯಿತು. ಅಹಿತಕರ ಘಟನೆ ತಡೆಯಲು ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ಡಿಸಿ, ಎಸ್‌ಪಿ ವರ್ಗಾವಣೆ
ಶಿವಮೊಗ್ಗ: ರಾಜ್ಯ ಸರ್ಕಾರವು ಐಎಎಸ್, ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದೆ. ಜಿಲ್ಲೆಯ ಜಿಲ್ಲಾಧಿಕಾರಿ ಮತ್ತು ಎಸ್‌ಪಿ ಅವರನ್ನು ವರ್ಗಾಯಿಸಲಾಗಿದೆ. ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರ ಸ್ಥಾನಕ್ಕೆ ಪ್ರಭುಲಿಂಗ್ ಕವಲಿಕಟ್ಟಿ ಅವರನ್ನು ಹಾಗೂ ಎಸ್‌ಪಿ ಮಿಥುನ್ ಕುಮಾರ್ ಅವರ ಸ್ಥಾನಕ್ಕೆ ಬಿ. ನಿಖಿಲ್ ಅವರನ್ನು ನೇಮಿಸಲಾಗಿದೆ.
ಕೆರೆಗಳ ಅಭಿವೃದ್ಧಿಗೆ ಜಿಲ್ಲಾಧಿಕಾರಿ ಸೂಚನೆ
ಶಿವಮೊಗ್ಗ: ಮಹಾನಗರ ಪಾಲಿಕೆ ವ್ಯಾಪ್ತಿಯ ಪುರಲೆ, ನವುಲೆ, ಗೋಪಶೆಟ್ಟಿಕೊಪ್ಪ ಮತ್ತು ತ್ಯಾವರಚಟ್ನಹಳ್ಳಿ ಕೆರೆಗಳನ್ನು ಅಮೃತ-2 ಯೋಜನೆಯಡಿ ಶೀಘ್ರ ಅಭಿವೃದ್ಧಿಪಡಿಸುವಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅಧಿಕಾರಿಗಳಿಗೆ ಸೂಚಿಸಿದರು. 2046ರ ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಒಳಚರಂಡಿ ಜಾಲ ಮತ್ತು ನೀರಿನ ಸಂಗ್ರಹಣಾ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಿಯಾ ಯೋಜನೆ ರೂಪಿಸಲು ಅವರು ಆದೇಶಿಸಿದರು.
ಮಾಜಿ ಎಂಎಲ್ಎ ಉಪವಾಸ ಸತ್ಯಾಗ್ರಹ
ಹೊಸನಗರ: ತಾಲೂಕು ಆರ್ಯ ಈಡಿಗ ಸಂಘದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಮತ್ತು ದುರಾಡಳಿತವನ್ನು ಖಂಡಿಸಿ ಮಾಜಿ ಶಾಸಕ ಬಿ. ಸ್ವಾಮಿ ರಾವ್ ಅವರು ಬುಧವಾರದಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಸಂಘದ ಅಧ್ಯಕ್ಷರ ರಾಜೀನಾಮೆ ಮತ್ತು ಸಮಗ್ರ ತನಿಖೆಗೆ ಆಗ್ರಹಿಸಿರುವ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಮುಖಂಡರು ಪ್ರತಿಭಟನೆ ಕೈಬಿಡಲು ಮನವೊಲಿಸುತ್ತಿದ್ದಾರೆ.
₹200 ಕೋಟಿ ಸಾಲು ಪಡೆಯಲು ಯೋಜನೆ
ಶಿವಮೊಗ್ಗ: ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ (ಎಂಎಡಿಬಿ) ವ್ಯಾಪ್ತಿಯ ಜಿಲ್ಲೆಗಳ ಸಂಖ್ಯೆ 13ರಿಂದ 10ಕ್ಕೆ ಇಳಿಕೆಯಾಗಿದೆ ಎಂದು ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ತಿಳಿಸಿದರು. ಮಲೆನಾಡು ಭಾಗದಲ್ಲಿ 400 ಕಾಲು ಸಂಕಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ ನಬಾರ್ಡ್‌ನಿಂದ ₹200 ಕೋಟಿ ಸಾಲ ಪಡೆಯಲು ಯೋಜನೆ ರೂಪಿಸಲಾಗಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ » ಮೆಕಾನಿಕಲ್ ಇಂಜಿನಿಯರ್ ಇನ್ಮುಂದೆ ಶಿವಮೊಗ್ಗ ಪೊಲೀಸ್ ಇಲಾಖೆಯ ‘ಮೈಕ್ ಒನ್ʼ
ಹಳೆ ಪಿಂಚಣಿ ನಿರಾಕರಣೆ, ವಿವಿ ಸಿಬ್ಬಂದಿ ಎಚ್ಚರಿಕೆ
ಶಿವಮೊಗ್ಗ: ವಿಶ್ವವಿದ್ಯಾಲಯಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಹಳೆ ಪಿಂಚಣಿ ಯೋಜನೆ (ಒಪಿಎಸ್) ನಿರಾಕರಿಸಿರುವುದು ಸರ್ಕಾರದ ತಾರತಮ್ಯದ ನಡೆಯಾಗಿದೆ ಎಂದು ಕುವೆಂಪು ವಿವಿ ಅಧ್ಯಾಪಕರ ಸಂಘ ಖಂಡಿಸಿದೆ. ತಾರತಮ್ಯ ಸರಿಪಡಿಸದಿದ್ದಲ್ಲಿ ನ್ಯಾಯಾಲಯದ ಮೊರೆ ಹೋಗುವುದಾಗಿ ಸಂಘ ಎಚ್ಚರಿಕೆ ನೀಡಿದೆ.
ಪುಷ್ಪಾಶ್ರೀ ಪ್ರಶಸ್ತಿ ಪ್ರದಾನ
ಶಿಕಾರಿಪುರ: ಮೌಲ್ಯಯುತ ಶಿಕ್ಷಣ ಮತ್ತು ಸಂಸ್ಕಾರ ನೀಡುವ ಮೂಲಕ ವಿದ್ಯಾರ್ಥಿಗಳನ್ನು ದೇಶದ ಸದೃಢ ಪ್ರಜೆಗಳನ್ನಾಗಿ ರೂಪಿಸಬೇಕು ಎಂದು ಮೌಂಟ್ ಕಾರ್ಮೆಲ್ ವಿದ್ಯಾಸಂಸ್ಥೆ ಕಾರ್ಯದರ್ಶಿ ರೋಷನ್ ಪಿಂಟೋ ಹೇಳಿದರು. ಪಟ್ಟಣದ ಪುಷ್ಪಾ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವದಲ್ಲಿ ಶಿವಮೊಗ್ಗದ ಪ್ಯೂಸ್ ಡಿಸೋಜಾ ಅವರಿಗೆ ‘ಪುಷ್ಪಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪೌರ ಕಾರ್ಮಿಕರಿಗೆ ಬಹುಮಾನ
ತೀರ್ಥಹಳ್ಳಿ: ಜನರ ಆರೋಗ್ಯ ಕಾಪಾಡುವಲ್ಲಿ ಪೌರ ಕಾರ್ಮಿಕರ ಸೇವೆ ಅನನ್ಯ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ ಶ್ಲಾಘಿಸಿದರು. ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ವಿವಿಧ ಸ್ಪರ್ಧೆಗಳಲ್ಲಿ ಗೆದ್ದವರಿಗೆ ಬಹುಮಾನ ಹಾಗೂ ಕಾರ್ಮಿಕರಿಗೆ ಗೃಹೋಪಯೋಗಿ ಉಪಕರಣಗಳನ್ನು ವಿತರಿಸಿ ಗೌರವಿಸಲಾಯಿತು.
ಅಧಿಕಾರಿಗಳು ಕನ್ನಡದಲ್ಲೇ ವ್ಯವಹರಿಸಿ
ಸಾಗರ: ಅಧಿಕಾರಿಗಳು ಮತ್ತು ನೌಕರರು ಸಾರ್ವಜನಿಕರೊಂದಿಗೆ ಕನ್ನಡದಲ್ಲೇ ವ್ಯವಹರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಕರೆ ನೀಡಿದರು. ಸರ್ಕಾರಿ ನೌಕರರ ಸಮಾವೇಶದಲ್ಲಿ ಮಾತನಾಡಿದ ಅವರು, ಕಚೇರಿಗಳಲ್ಲಿ ಜನಸ್ನೇಹಿ ಸೇವೆಯ ಮಹತ್ವವನ್ನು ಒತ್ತಿ ಹೇಳಿದರು. ಇದೇ ವೇಳೆ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ಎನ್‌ಪಿಎಸ್ ರದ್ದತಿ ಹೋರಾಟದ ಕುರಿತು ಪ್ರಸ್ತಾಪಿಸಿದರು.
ಗುರುಬಸವ ಸ್ವಾಮೀಜಿ ಪುಣ್ಯಸ್ಮರಣೋತ್ಸವ
ಶಿವಮೊಗ್ಗ: ಬೆಕ್ಕಿನಕಲ್ಮಠದಲ್ಲಿ ಜ. 3ರಿಂದ 5ರವರೆಗೆ ಲಿಂಗೈಕ್ಯ ಗುರುಬಸವ ಸ್ವಾಮಿಗಳ 114ನೇ ಪುಣ್ಯಸ್ಮರಣೋತ್ಸವ ಆಯೋಜಿಸಲಾಗಿದೆ. ಈ ವರ್ಷದ ‘ಗುರುಬಸವಶ್ರೀ’ ಪ್ರಶಸ್ತಿಯನ್ನು ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಹಾಗೂ ‘ಅಕ್ಕಮಹಾದೇವಿ’ ಪ್ರಶಸ್ತಿಯನ್ನು ಸಾಹಿತಿ ಡಾ. ಜಯಶ್ರೀ ದಂಡೆ ಅವರಿಗೆ ನೀಡಲಾಗುತ್ತಿದೆ ಎಂದು ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ ತಿಳಿಸಿದರು.
ಮಾದರ ಮಹಾಸಭಾ ಸಂಘಟನೆ ರಚನೆ
ಶಿಕಾರಿಪುರ: ಸಮುದಾಯದ ಏಕತೆಗಾಗಿ ಮಾದರ ಮಹಾಸಭಾ ಸಂಘಟನೆಯನ್ನು ರಚಿಸಲಾಗಿದೆ. ಎಲ್ಲ ಉಪಜಾತಿಗಳನ್ನು ಒಗ್ಗೂಡಿಸಿ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ತಾಲೂಕು ಅಧ್ಯಕ್ಷ ಬಸವರಾಜ ಮುಗಳಗೆರೆ ಹೇಳಿದರು. ಸಂಘಟನೆ ಹೆಸರಿನಲ್ಲಿ ಹಣ ಎತ್ತುವಳಿ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಸಿದರು.
ಇ-ಪೌತಿ ಆಂದೋಲನ ಸದುಪಯೋಗಕ್ಕೆ ಸೂಚನೆ
ರಿಪ್ಪನ್‌ಪೇಟೆ: ಮರಣ ಹೊಂದಿದ ವ್ಯಕ್ತಿಯ ಹೆಸರಿನಲ್ಲಿರುವ ಜಮೀನಿನ ಖಾತೆಯನ್ನು ಕುಟುಂಬದ ಸದಸ್ಯರ ಹೆಸರಿಗೆ ಬದಲಾಯಿಸಲು ‘ಇ-ಪೌತಿ’ ಆಂದೋಲನವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಹಶೀಲ್ದಾರ್ ಭರತ್ ರಾಜ್ ತಿಳಿಸಿದರು. ಖಾತಾ ಬದಲಾವಣೆಯಾಗದಿದ್ದರೆ ಬೆಳೆ ವಿಮೆ ಮತ್ತು ಸರ್ಕಾರದ ಸವಲತ್ತುಗಳು ದೊರೆಯುವುದಿಲ್ಲ ಎಂದು ಅವರು ಮಾಹಿತಿ ನೀಡಿದರು.
Top News
LATEST NEWS
- ಮಾಚೇನಹಳ್ಳಿ ಸುತ್ತಮುತ್ತ ಜನವರಿ 17ರಂದು ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ? ಇಲ್ಲಿದೆ ಲಿಸ್ಟ್

- ಶಿವಮೊಗ್ಗದಿಂದ ಮತ್ತಷ್ಟು ಊರುಗಳಿಗೆ ರೈಲು, ಸಂಸದ ರಾಘವೇಂದ್ರ ಹೇಳಿಕೆ, ಇಲ್ಲಿದೆ ಪಾಯಿಂಟ್ಸ್

- ತೀರ್ಥಹಳ್ಳಿ ಅಪಘಾತ, ಸಾವಿನ ಸಂಖ್ಯೆ ಹೆಚ್ಚಳ, ಆಗಿದ್ದೇನು? ಇಲ್ಲಿದೆ ಫುಲ್ ಡಿಟೇಲ್ಸ್

- ಮತ್ತೆ ಏರಿತು ಅಡಿಕೆ ರೇಟ್, ಒಂದು ಲಕ್ಷದ ಸಹಿಕ್ಕೆ ಧಾರಣೆ | 14 ಜನವರಿ 2026 | ಇವತ್ತಿನ ಅಡಿಕ ಧಾರಣೆ

- ಶಿವಮೊಗ್ಗ ಕೇಂದ್ರ ಕಾರಾಗೃಹದ ಕೈದಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವು, ಆಗಿದ್ದೇನು?

About The Editor
ನಿತಿನ್ ಆರ್.ಕೈದೊಟ್ಲು






