ಶಿವಮೊಗ್ಗ: ನಗರದ ಸೋಗಾನೆ ಕೇಂದ್ರ ಕಾರಾಗೃಹದ ಆವರಣದೊಳಗೆ ಮೊಬೈಲ್ ಮತ್ತು ಮಾದಕ ವಸ್ತುಗಳನ್ನು ಎಸೆದಿದ್ದ ಮೂವರು ಆರೋಪಿಗಳನ್ನು (gang) ತುಂಗಾನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಜೈಲಿನ ಗೋಡೆಯ ಹೊರಗಿನಿಂದ ನಿಷೇಧಿತ ವಸ್ತುಗಳನ್ನು ಒಳಕ್ಕೆ ಎಸೆಯುತ್ತಿದ್ದ ಜಾಲವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಜನವರಿ 30ರಂದು ಅಪರಿಚಿತ ವ್ಯಕ್ತಿಗಳು ಕೇಂದ್ರ ಕಾರಾಗೃಹದ ಒಳಗೆ ಕಪ್ಪು ಬಣ್ಣದ ಗಮ್ ಟೇಪ್‌ನಿಂದ ಪ್ಯಾಕೆಟ್ ಎಸೆದಿದ್ದರು. ಅದರ ಒಳಗೆ ಮೊಬೈಲ್ ಫೋನ್‌ಗಳು, ಸಿಗರೇಟ್ ಹಾಗೂ ಬೀಡಿಗಳ ಕಂತೆಗಳನ್ನು ಇದ್ದವು. ಈ ಬಗ್ಗೆ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ. ರಂಗನಾಥ್ ಅವರು ನೀಡಿದ ದೂರಿನ ಮೇರೆಗೆ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ – ಸೋಗಾನೆಯಲ್ಲಿ ಧಗಧಗ ಹೊತ್ತಿ ಉರಿದ ತೊಗರಿ, ಹುರುಳಿಯ ಬೊಣವೆ, ಆಗಿದ್ದೇನು?
ಪ್ಯಾಕೆಟ್ ಎಸೆದಿದ್ದ ಟಿಪ್ಪುನಗರ ನಿವಾಸಿ ಇಮ್ರಾನ್ ಪಾಷಾ ಅಲಿಯಾಸ್ ಇಮ್ಮು (25), ಸೈಯ್ಯದ್ ಮಲ್ಲಿಕ್ ಅಲಿಯಾಸ್ ತಬ್ರೇಜ್ (22), ಅಂಬೇಡ್ಕರ್ ನಗರ ನಿವಾಸಿ ಅಲ್ಲಾ ಬಕಶ್ ಅಲಿಯಾಸ್ ಪೊಟ್ಯಾಟೋ (20) ಎಂಬುವವರನ್ನು ಬಂಧಿಸಲಾಗಿದೆ.

ತುಂಗಾನಗರ ಇನ್ಸ್‌ಪೆಕ್ಟರ್ ಕೆ.ಟಿ. ಗುರುರಾಜ್ ನೇತೃತ್ವದ ತಂಡ ಮೂವರನ್ನು ಬಂಧಿಸಿದೆ. ಆರೋಪಿಗಳಿಂದ ಮೊಬೈಲ್ ಫೋನ್ ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪಿಎಸ್‌ಐ ಗಾದಿಲಿಂಗಗೌಡರ್, ರಘುವೀರ್, ಅಪರಾಧ ವಿಭಾಗದ ಸಿಬ್ಬಂದಿ ಅರುಣ್, ಕಿರಣ್, ರಂಗನಾಥ್, ತಮ್ಮಣ್ಣ ಜಂಬಗಿ ಕಾರ್ಯಾಚರಣೆಯಲ್ಲಿ ಇದ್ದರು.
