ಶಿವಮೊಗ್ಗ: ಶಿವಮೊಗ್ಗ – ಯಶವಂತಪುರ ಎಕ್ಸ್‌ಪ್ರೆಸ್ ರೈಲಿನಲ್ಲಿ (Express train) ಪ್ರಯಾಣಿಕರೊಬ್ಬರನ್ನು ಚಾಕು ತೋರಿಸಿ ಬೆದರಿಸಿ ಮೊಬೈಲ್ ದೋಚಿದ್ದ ಇಬ್ಬರು ಆರೋಪಿಗಳನ್ನು ರೈಲ್ವೆ ರಕ್ಷಣಾ ಪಡೆ ಮತ್ತು ರೈಲ್ವೆ ಪೊಲೀಸ್ ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿವೆ.
ಫೆಬ್ರವರಿ 11ರಂದು ರಾತ್ರಿ 12.20ಕ್ಕೆ ಶಿವಮೊಗ್ಗ-ಯಶವಂತಪುರ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 16582) ರೈಲು ಶಿವಮೊಗ್ಗದ ವಿದ್ಯಾನಗರದ ನಿಲ್ದಾಣದ ಬಳಿ ಚಲಿಸುತ್ತಿದ್ದಾಗ ಈ ಕೃತ್ಯ ನಡೆದಿತ್ತು. ಎಸ್-9 ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ ಚಾಕು ತೋರಿಸಿ ಬೆದರಿಸಿದ ದುಷ್ಕರ್ಮಿಯು, ₹17,000 ಮೌಲ್ಯದ ಮೊಬೈಲ್ ಕಿತ್ತುಕೊಂಡು ಚಲಿಸುವ ರೈಲಿನಿಂದ ಜಿಗಿದು ಪರಾರಿಯಾಗಿದ್ದ ಎಂದು ಆರೋಪಿಸಲಾಗಿತ್ತು.

ಪ್ರಕರಣ ದಾಖಲಿಸಿಕೊಂಡಿದ್ದ ಶಿವಮೊಗ್ಗ ರೈಲ್ವೆ ಪೊಲೀಸರು ಆರ್‌ಪಿಎಫ್ ಇನ್ಸ್‌ಪೆಕ್ಟರ್ ಬಿ.ಕೆ. ಪ್ರಕಾಶ ಮತ್ತು ಜಿಆರ್‌ಪಿ ಸಬ್ ಇನ್ಸ್‌ಪೆಕ್ಟರ್ ಮಹೇಶ್ ನೇತೃತ್ವದ ಜಂಟಿ ತಂಡ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಶಿವಮೊಗ್ಗದ ರಾಜೀವ್ ಗಾಂಧಿ ಬಡಾವಣೆಯ ಪರಶುರಾಮ್ ಅಲಿಯಾಸ್ ಚಿಂಗಾರಿ (29) ಮತ್ತು ಮೊಹಮ್ಮದ್ ಹುಸೇನ್ ಎಂಬುವವರನ್ನು ಬಂಧಿಸಿದ್ದಾರೆ. ಇವರಿಂದ ಮಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ – ರವೀಂದ್ರ ನಗರದಲ್ಲಿ ರಾತ್ರಿ ನಿಲ್ಲಿಸಿದ್ದ ಬೈಕ್ ಮಿಸ್ಸಿಂಗ್, ಆಗಿದ್ದೇನು?


About The Editor
ನಿತಿನ್ ಆರ್.ಕೈದೊಟ್ಲು






