ಶಿವಮೊಗ್ಗ: ಹೊಸನಗರ ತಾಲೂಕನ್ನು ಪ್ರತ್ಯೇಕ ವಿಧಾನಸಭಾ ಕ್ಷೇತ್ರವನ್ನಾಗಿ (constituency) ಮರುಸ್ಥಾಪಿಸಬೇಕೆಂಬ ದಶಕಗಳ ಬೇಡಿಕೆಗೆ ಈಗ ಸಂಸತ್ತಿನಲ್ಲೂ ದನಿ ಸಿಕ್ಕಿದೆ. ಶಿವಮೊಗ್ಗದ ಸಂಸದ ಬಿ.ವೈ.ರಾಘವೇಂದ್ರ ಲೋಕಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿ, ಕೇಂದ್ರ ಸರ್ಕಾರದ ಗಮನ ಸೆಳೆದಿದ್ದಾರೆ.
ಸಂಸದ ರಾಘವೇಂದ್ರ ಏನೆಲ್ಲ ಹೇಳಿದರು?
ಲೋಕಸಭೆಯಲ್ಲಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, 1972 ರಿಂದ 2004 ರವರೆಗೆ ಹೊಸನಗರವು ರಾಜಕೀಯ ಮತ್ತು ಆಡಳಿತಾತ್ಮಕ ಅಸ್ತಿತ್ವ ಹೊಂದಿತ್ತು. ಆದರೆ 2008ರ ಕ್ಷೇತ್ರ ಮರುವಿಂಗಡಣೆಯ ಸಂದರ್ಭ ಈ ತಾಲೂಕನ್ನು ನೆರೆಯ ವಿಧಾನಸಭಾ ಕ್ಷೇತ್ರಗಳ ನಡುವೆ ವಿಭಜಿಸಲಾಗಿದೆ. ಈ ನಿರ್ಧಾರವು ಹೊಸನಗರದ ಸಮಗ್ರ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂಬುದು ಸ್ಥಳೀಯರ ದೂರು.
ಪಶ್ಚಿಮ ಘಟ್ಟದ ವ್ಯಾಪ್ತಿಯ ಪ್ರದೇಶ ಭೌಗೋಳಿಕವಾಗಿ ಮತ್ತು ಆರ್ಥಿಕವಾಗಿ ವಿಭಿನ್ನ ಸವಾಲುಗಳನ್ನು ಹೊಂದಿದೆ. ಶರಾವತಿ ಮತ್ತು ವಾರಾಹಿ ನದಿಗಳ ಉಗಮ ಸ್ಥಾನವಾಗಿರುವ ಇಲ್ಲಿನ ಜನರ ಸಮಸ್ಯೆಗಳು ನಗರ ಪ್ರದೇಶಗಳಿಗಿಂತ ಭಿನ್ನ. ಅವುಗಳನ್ನು ಸಮರ್ಥವಾಗಿ ಪ್ರತಿನಿಧಿಸಲು ಪ್ರತ್ಯೇಕ ಕ್ಷೇತ್ರದ ಅಗತ್ಯವಿದೆ ಎಂದು ಸಂಸದ ರಾಘವೇಂದ್ರ ಪ್ರತಿಪಾದಿಸಿದರು.

ಏಪ್ರಿಲ್ ಮೊದಲ ವಾರದಲ್ಲಿ ಹೊಸನಗರದಲ್ಲಿ ನಡೆದ ಬೃಹತ್ ಪಾದಯಾತ್ರೆಯು ಸರ್ಕಾರದ ಕಣ್ಣು ತೆರೆಸುವಂತಿತ್ತು. ಜಾತಿ, ಮತ ಮತ್ತು ಪಕ್ಷಾತೀತವಾಗಿ ಸಾವಿರಾರು ಜನರು, ಮಠಾಧೀಶರು, ಮಹಿಳೆಯರು ಮತ್ತು ವಿದ್ಯಾರ್ಥಿಗಳು ಸುಡು ಬಿಸಿಲನ್ನೂ ಲೆಕ್ಕಿಸದೆ ಕಿಲೋಮೀಟರ್‌ಗಟ್ಟಲೆ ಹೆಜ್ಜೆ ಹಾಕಿ ತಮ್ಮ ಹಕ್ಕೊತ್ತಾಯ ಮಂಡಿಸಿದ್ದರು ಎಂದು ತಿಳಿಸಿದರು.
ಇದನ್ನೂ ಓದಿ : ಹೊಸನಗರ ಕ್ಷೇತ್ರ ಮರು ರಚನೆ, ಪಾದಯಾತ್ರೆ ಸಮಾರೋಪ, ಸಚಿವ, ಸಂಸದರು ಏನಂದ್ರು?
ಪಶ್ಚಿಮ ಘಟ್ಟಗಳ ಸುಮಾರು 1,600 ಕಿಲೋಮೀಟರ್ ವ್ಯಾಪ್ತಿಯ ಕಠಿಣ ಭೂಪ್ರದೇಶಗಳನ್ನು ಕೇವಲ ಜನಸಂಖ್ಯೆಯ ಆಧಾರದ ಮೇಲೆ ನಗರ ಪ್ರದೇಶಗಳೊಂದಿಗೆ ಹೋಲಿಕೆ ಮಾಡುವುದು ಅವೈಜ್ಞಾನಿಕ. ಇಲ್ಲಿನ ವಿಸ್ತಾರವಾದ ಅರಣ್ಯ ಪ್ರದೇಶ ಮತ್ತು ಚದುರಿದ ಜನವಸತಿಯಿಂದಾಗಿ ಆಡಳಿತಾತ್ಮಕ ಅನುಕೂಲಕ್ಕಾಗಿ ಹೊಸನಗರಕ್ಕೆ ಪ್ರತ್ಯೇಕ ಅಸ್ತಿತ್ವ ನೀಡುವುದು ಅನಿವಾರ್ಯವಾಗಿದೆ. ಇದು ಕೇವಲ ರಾಜಕೀಯ ಬೇಡಿಕೆಯಲ್ಲ, ಬದಲಾಗಿ ಮಲೆನಾಡಿನ ಘನತೆ ಮತ್ತು ನ್ಯಾಯಯುತ ಪ್ರಾತಿನಿಧ್ಯದ ಪ್ರಶ್ನೆಯಾಗಿದೆ. ಮುಂದಿನ ಕ್ಷೇತ್ರ ಮರುವಿಂಗಡಣೆಯ ಸಂದರ್ಭ ಈ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕೆಂಬ ಒತ್ತಾಯ ಕೇಳಿಬಂದಿದೆ ಎಂದು ಸಂಸದ ರಾಘವೇಂದ್ರ ಕೇಂದ್ರ ಸರ್ಕಾರದ ಗಮನ ಸೆಳೆದರು.

About The Editor
ನಿತಿನ್ ಆರ್.ಕೈದೊಟ್ಲು






