ಶಿವಮೊಗ್ಗ: ಜಿಲ್ಲೆಯಲ್ಲಿ ಭಾನುವಾರ ಸಂಜೆ ಸುರಿದ ಭಾರಿ ಗಾಳಿ ಸಹಿತ ಮಳೆಯಾಗಿದೆ. ಇದರಿಂದ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯ ಹೊಳೆಹೊನ್ನೂರು, ಅನವೇರಿ ಸೇರಿ ವಿವಿಧೆಡೆ ಮಳೆಯಿಂದ ಹಾನಿ ಉಂಟಾಗಿದೆ. ಸರ್ಕಾರ ತಕ್ಷಣವೇ ಪರಿಹಾರ ಒದಗಿಸಬೇಕು ಎಂದು ಬಿಜೆಪಿ ನಿಯೋಗ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿತು.
ಸಂಸದ ಬಿ.ವೈ.ರಾಘವೇಂದ್ರ ನೇತೃತ್ವದ ನಿಯೋಗ ಉಸ್ತವಾರಿ ಜಿಲ್ಲಾಧಿಕಾರಿ ಆಗಿರುವ ಜಿಲ್ಲಾ ಪಂಚಾಯಿತಿ ಸಿಇಒ ಎನ್.ಹೇಮಂತ್ ಅವರಿಗೆ ಮನವಿ ಸಲ್ಲಿತು.
ಮಳೆಯಿಂದ ಹಾನಿ: ಸಂಸದ ರಾಘವೇಂದ್ರ ಏನೆಲ್ಲ ಹೇಳಿದರು?
ಮನವಿ ಸಲ್ಲಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಂಸದ ಬಿ.ವೈ.ರಾಘವೇಂದ್ರ ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಿದರು.
ಬಿರುಗಾಳಿ ಮಳೆಯ ಆರ್ಭಟ: ಭಾರಿ ವೇಗದಲ್ಲಿ ಬೀಸಿದ ಗಾಳಿಯಿಂದಾಗಿ ನೂರಾರು ಮರಗಳು ನೆಲಕ್ಕುರುಳಿವೆ. ಮನೆಗಳ ಮೇಲ್ಛಾವಣಿ ಹಾರಿಹೋಗಿವೆ. ಬೆಳೆ ಸಂಪೂರ್ಣ ನಾಶವಾಗಿವೆ.
ಇದನ್ನೂ ಓದಿ : ಶಿವಮೊಗ್ಗ ಗಾಳಿ, ಮಳೆ: 1 ಕಾರು ಜಖಂ, ಹಾರಿದ ಮನೆಗಳ ಛಾವಣಿ
ವಿದ್ಯುತ್ ಸಂಪರ್ಕ ಪುನರ್ ಸ್ಥಾಪನೆ: ಹಲವು ಕಡೆ ವಿದ್ಯುತ್ ಕಂಬಗಳು ಧರೆಗುರುಳಿವೆ. ಮೆಸ್ಕಾಂ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ವಿದ್ಯುತ್ ಸಂಪರ್ಕ ಪುನರ್ ಸ್ಥಾಪಿಸಬೇಕು.
ಪರಿಹಾರಕ್ಕೆ ಒತ್ತಾಯ: ಮಳೆಯಿಂದ ಆಗಿರುವ ಹಾನಿ ಕುರಿತು ತಕ್ಷಣ ಸಮೀಕ್ಷೆ ನಡೆಸಬೇಕು. ಸಂತ್ರಸ್ತ ರೈತರಿಗೆ ಹಾಗೂ ಸಾರ್ವಜನಿಕರಿಗೆ ಸರ್ಕಾರದಿಂದ ಕೂಡಲೇ ಸೂಕ್ತ ಪರಿಹಾರ ಧನ ವಿತರಿಸಬೇಕು ಎಂದು ಮನವಿ ಮಾಡಲಾಗಿದೆ.
ಕಾರ್ಯಪಡೆ ರಚನೆ: ಮುಂಗಾರು ಆರಂಭಕ್ಕೂ ಮುನ್ನ ಇಂತಹ ಘಟನೆಗಳು ಸಂಭವಿಸುವುದರಿಂದ, ತುರ್ತು ರಕ್ಷಣಾ ಕಾರ್ಯಗಳಿಗಾಗಿ ವಿಶೇಷ ಕಾರ್ಯಪಡೆ ರಚಿಸಬೇಕು.

ಬೆಳೆ ವಿಮೆಯಲ್ಲಿ ಅನ್ಯಾಯ
‘ಕಳೆದ ವರ್ಷದ ಬೆಳೆ ವಿಮೆ ಪಾವತಿಯಲ್ಲಿ ರೈತರಿಗೆ ಅನ್ಯಾಯವಾಗಿದೆ. ಸುಮಾರು ₹70 ಕೋಟಿ ಬಾಕಿ ಉಳಿದಿದೆ. ಜಿಲ್ಲೆಯ ಶೇ.70ಕ್ಕೂ ಹೆಚ್ಚು ಮಳೆ ಮಾಪಕಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದಾಗಿ ಬೆಳೆ ನಷ್ಟದ ವರದಿಯಲ್ಲಿ ವ್ಯತ್ಯಾಸ ಉಂಟಾಗಿದೆ. ಮಳೆ ಮಾಪಕಗಳು ಹಾಳಾಗಿರುವ ಕುರಿತು ಜಿಲ್ಲಾಧಿಕಾರಿಗೆ ವರದಿ ನೀಡಿದಾರೆʼ ಎಂದು ರಾಘವೇಂದ್ರ ಹೇಳಿದರು.
‘ಸರ್ಕಾರ ಕೇವಲ ವರದಿ ಪಡೆದು ಸುಮ್ಮನಾಗಬಾರದು. ಮಳೆ ಮಾಪಕವನ್ನು ಸರಿಪಡಿಸಿ ಮುಂದಿನ ಮಳೆಗಾಲದಲ್ಲಿ ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ಇನ್ನು, ಈಗ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದ್ದೇವೆ’ ಎಂದು ರಾಘವೇಂದ್ರ ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ವಿಧಾನ ಪರಿಷತ್ಯ ಸದಸ್ಯರಾದ ಡಿ.ಎಸ್.ಅರುಣ್, ಡಾ. ಧನಂಜಯ ಸರ್ಜಿ, ಮಾಜಿ ಶಾಸಕ ಕೆ.ಬಿ.ಅಶೋಕ್ ನಾಯ್ಕ್, ಪ್ರಮುಖರಾದ ಬಳ್ಳೆಕೆರೆ ಸಂತೋಷ್, ವಿನ್ಸೆಂಟ್ ರೋಡ್ರಿಗಸ್ ಸೇರಿದಂತೆ ಹಲವರು ಇದ್ದರು.







