ಶಿವಮೊಗ್ಗ: ಮಧ್ಯ ಕರ್ನಾಟಕ ಜಿಲ್ಲೆಗಳನ್ನು ಒಳಗೊಂಡಂತೆ ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ (Circuit Bench) ಸ್ಥಾಪಿಸಬೇಕು ಎಂದು ಶಿವಮೊಗ್ಗದಲ್ಲಿ ಹೈಕೋರ್ಟ್ ಸರ್ಕ್ಯೂಟ್ ಬೆಂಚ್ ಸ್ಥಾಪನಾ ಹೋರಾಟ ಸಮಿತಿಯ ಗೌರವಾಧ್ಯಕ್ಷ ಕೆ.ಬಸಪ್ಪಗೌಡ ಆಗ್ರಹಿಸಿದರು.
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಜಿಲ್ಲೆಗಳ ಜನಸಂಖ್ಯೆಯೂ ಹೆಚ್ಚಿದೆ. ಈ ನಿಟ್ಟಿನಲ್ಲಿ ಶಿವಮೊಗ್ಗದಲ್ಲಿ ಹೈಕೋರ್ಟ್ ಸರ್ಕ್ಯೂಟ್ ಬೆಂಚ್ ಸ್ಥಾಪಿಸಲೇಬೇಕು ಎಂದು ಆಗ್ರಹಿಸಲು ಹೋರಾಟ ಸಮಿತಿ ರಚಿಸಲಾಗಿದೆ ಎಂದರು.
ಹೋರಾಟ ಸಮಿತಿ ಆಗ್ರಹಗಳೇನು?
ಈಗಾಗಲೆ ರಾಜ್ಯದಲ್ಲಿ ಎರಡು ಸಂಚಾರಿ ಪೀಠಗಳಿವೆ. ಮೂರನೇ ಬೆಂಚ್ ನೀಡುವುದಾದರೆ ಅದನ್ನು ಶಿವಮೊಗ್ಗಕ್ಕೆ ನೀಡಬೇಕು. ಇದರಿಂದ ಭೌಗೋಳಿಕವಾಗಿ ಹೊಂದಾಣಿಕೆ ಆಗಿರುವ ಮಧ್ಯ ಕರ್ನಾಟಕದ ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಚಿತ್ರದುರ್ಗ ಮತ್ತು ಉಡುಪಿ ಜಿಲ್ಲೆಗಳಿಗೆ ಅನುಕೂಲವಾಗಲಿದೆ. ಜಿಲ್ಲೆಯಲ್ಲಿ ಉತ್ತಮವಾದ ಬಾರ್ ಕೌನ್ಸಿಲ್ ಇದೆ ಎಂದರು.

ಈಗಾಗಲೆ ಕರಾವಳಿ ಸಂಚಾರಿ ಪೀಠವನ್ನು ಮಂಗಳೂರಿನಲ್ಲಿ ಸ್ಥಾಪಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಇದಕ್ಕಾಗಿ ಸ್ಥಳವನ್ನು ಗುರುತಿಸಿರುವ ಮಾಹಿತಿ ಇದೆ. ಈ ಪೀಠಕ್ಕೆ ಶಿವಮೊಗ್ಗ ಜಿಲ್ಲೆ ಸೇರಿಸಲಾಗುವುದು ಎಂಬ ಮಾಹಿತಿ ಇದೆ. ಇದನ್ನ ನಾವು ಒಪ್ಪುವುದಿಲ್ಲ. ಈ ಬಗ್ಗೆ ಜನರ ಅಭಿ ಪ್ರಾಯ ಮುಖ್ಯವಾಗುತ್ತದೆ. ಈ ಎಲ್ಲ ಅಂಶಗಳನ್ನು ಮೀರಿ ಜಿಲ್ಲೆಯನ್ನು ಕರಾವಳಿ ಪೀಠಕ್ಕೆ ಸೇರಿಸಲು ಮುಂದಾದರೆ ಹೋರಾಟ ನಡೆಸಲಾಗುವುದು ಎಂದರು.
ಇದನ್ನೂ ಓದಿ : ಶಿವಮೊಗ್ಗದ ಲೇಔಟ್‌ಗಳಲ್ಲಿ ಪಾರ್ಟಿ ಮಾಡ್ತಿದ್ದಾಗ ‘ಡ್ರೋಣ್ ದಾಳಿʼ
ಈ ವರೆಗೂ ಅಧಿಸೂಚನೆ ಆಗದಿರುವುದರಿಂದ ಶಿವಮೊಗ್ಗ ಜಿಲ್ಲೆಯನ್ನು ಕರಾವಳಿ ಸಂಚಾರಿ ಪೀಠಕ್ಕೆ ಸೇರಿಸುವುದನ್ನು ತಡೆಯಲು ಸಾಧ್ಯವಿದೆ. ರೈತ ಸಂಘ, ಡಿಎಸ್‌ಎಸ್, ಕಾರ್ಮಿಕ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಜತೆ ಚರ್ಚಿಸಿ, ಅಭಿಪ್ರಾಯ ಸಂಗ್ರಹಿಸಲಾಗುವುದು. ನಂತರ ಜಿಲ್ಲೆಯ ಜನಪ್ರತಿನಿಧಿಗಳು, ರಾಜ್ಯಪಾಲರು, ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ, ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸುವಂತೆ ಆಗ್ರಹಿಸಿಲಿದ್ದೇವೆ ಎಂದರು.
ಜಿ.ಆರ್.ರಾಘವೇಂದ್ರ ಸ್ವಾಮಿ, ಎ. ಗೋಪಿಕೃಷ್ಣ ಕೆ.ವಾಸುದೇವಮೂರ್ತಿ, ಎಸ್.ಎ.ಶ್ರೀನಿವಾಸ್, ಅತಾವುಲ್ಲಾ ಖಾನ್, ಶ್ವೇತ ಮತ್ತಿತರರಿದ್ದರು.
shivamogga news, high court circuit bench, karnataka high court, k basappagowda, central karnataka news, shivamogga bar association, high court bench demand, shivamoggalive news







