ತೀರ್ಥಹಳ್ಳಿ: ಮಾಜಿ ಶಾಸಕ ಕೋಣಂದೂರು ಲಿಂಗಪ್ಪ ಅವರಿಗೆ ಸೇರಿದ ಅಡಿಕೆ ತೋಟದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಅನಿರೀಕ್ಷಿತವಾಗಿ ಅಗಳು ತೋಡುವ (trench) ಕಾರ್ಯಾಚರಣೆ ನಡೆಸಿದ್ದರು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು ನೂರು ಹಾರೆ – ಗುದ್ದಲಿಗಳಿಂದ ಅಗಳು ಮುಚ್ಚುವ ಚಳವಳಿ ನಡೆಯಿತು.
ತಾಲೂಕಿನ ಕೋಣಂದೂರು ಸಮೀಪದ ಮೇಲಿನ ಕಡಗೋಡಿನಲ್ಲಿ ಇರುವ ಕೋಣಂದೂರು ಲಿಂಗಪ್ಪ ಅವರ ತೋಟದಲ್ಲಿ ಚಳವಳಿ ನಡೆಯಿತು. ಮಾಜಿ ಶಾಸಕ ಬಿ.ಸ್ವಾಮಿರಾವ್ ಅವರು ಅಗಳು ಮುಚ್ಚುವ ಚಳವಳಿಗೆ ಚಾಲನೆ ನೀಡಿದರು.

ಇಲ್ಲಿದ ಹೋರಾಟದ ಹೈಲೈಟ್ಸ್
ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ಮುನ್ಸೂಚನೆ ಅಗಳು ತೆಗೆದಿದ್ದಾರೆ. ಈ ವೇಳೆ ಬೇಲಿ ಮತ್ತು ನೀರಿನ ಪೈಪ್ಗಳನ್ನು ಧ್ವಂಸಗೊಳಸಲಾಗಿದೆ. ಇದನ್ನು ಖಂಡಿಸಿ ಮಲೆನಾಡು ಸಂಘರ್ಷ ಹೋರಾಟ ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.
- ಅಗಳು ಮುಚ್ಚಿದ ಸ್ವಾಮಿರಾವ್: 96 ವರ್ಷದ ಹಿರಿಯ ಸಮಾಜವಾದಿ ಬಿ. ಸ್ವಾಮಿರಾವ್ ಅವರು ಗುದ್ದಲಿ ಹಿಡಿದು, ಅರಣ್ಯ ಇಲಾಖೆ ತೋಡಿದ್ದ ಅಗಳನ್ನು ಮುಚ್ಚುವ ಮೂಲಕ ಚಳವಳಿಗೆ ಚಾಲನೆ ನೀಡಿದರು.
- 70 ವರ್ಷದ ಸಾಗುವಳಿಗೆ ಧಕ್ಕೆ: ಏಳು ದಶಕಗಳಿಂದ ಸಾಗುವಳಿಯಲ್ಲಿರುವ ಭೂಮಿಯಲ್ಲಿ ಇಲಾಖೆ ದಬ್ಬಾಳಿಕೆ ನಡೆಸಿರುವುದು ಅನ್ಯಾಯದ ಪರಮಾವಧಿ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.
- ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ: “ಅರಣ್ಯ ನಾಶವಾಗುತ್ತಿರುವುದು ಅಧಿಕಾರಿಗಳಿಂದಲೇ ಹೊರತು ರೈತರಿಂದಲ್ಲ” ಎಂದು ಸ್ವಾಮಿರಾವ್ ಅಸಮಾಧಾನ ವ್ಯಕ್ತಪಡಿಸಿದರು. “ಈ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸುತ್ತೇನಬೆ” ಎಂದು ಭರವಸೆ ನೀಡಿದರು.
- ಮುಳುಗಡೆ ಸಂತ್ರಸ್ತರ ನೋವು: “ಬಗರ್ಹುಕುಂ ಮತ್ತು ಮುಳುಗಡೆ ಸಂತ್ರಸ್ತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ ಹಾಗೂ ಅರಣ್ಯ ಹಕ್ಕು ಕಾಯ್ದೆಯು ಸಮರ್ಪಕವಾಗಿ ಜಾರಿಯಾಗುತ್ತಿಲ್ಲ” ಎಂದು ತೀ.ನಾ.ಶ್ರೀನಿವಾಸ್ ಕಿಡಿಕಾರಿದರು.
- ಬಿಗಿ ಬಂದೋಬಸ್ತ್: ಚಳವಳಿಯ ಹಿನ್ನಲೆ ಮಾಜಿ ಶಾಸಕ ಕೋಣಂದೂರು ಲಿಂಗಪ್ಪ ಅವರ ಮನೆ ಮತ್ತು ತೋಟದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿತ್ತು.

ಪ್ರತಿಭಟನೆಯಲ್ಲಿ ನೂರಾರು ರೈತರು ಅಡಿಕೆ ಹಾಳೆಯ ಟೋಪಿ ಧರಿಸಿ, ಹಾರೆ-ಗುದ್ದಲಿ ಹಿಡಿದು ಅರಣ್ಯ ಇಲಾಖೆಯ ವಿರುದ್ಧ ಘೋಷಣೆ ಕೂಗಿದರು. ಸಾಂಕೇತಿಕವಾಗಿ ಅಗಳನ್ನು ಮುಚ್ಚಿದರು.
ಇದನ್ನೂ ಓದಿ : ಕಾಡಿನಲ್ಲಿ ಸಿಕ್ತು ಮ್ಯಾಮ್ಕೋಸ್ನ 1 ಕೋಟಿ ಮೌಲ್ಯದ ಅಡಿಕೆ, ಲಾರಿ, ಏನಿದು ಪ್ರಕರಣ?
ಮಲೆನಾಡು ಸಂಘರ್ಷ ಕ್ರಿಯಾ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಹೊಸಕೊಪ್ಪ ಸುಂದರೇಶ್, ಸಾಗರದ ಬಿ.ಆರ್.ಜಯಂತ್, ತೀರ್ಥಹಳ್ಳಿ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಈ.ಅಶೋಕ್, ಗಿರಿಜಮ್ಮ ಲಿಂಗಪ್ಪ, ಇಸ್ರೋ ನಿರ್ದೇಶಕಿ ಶಿವಾನಿ, ವಕೀಲ ಕೆ.ಪಿ.ಶ್ರೀಪಾಲ್, ಬಿ.ಚಂದ್ರೇಗೌಡ, ಪ್ರಭಾಕರ, ದಿನೇಶ್ ಶಿರವಾಳ, ಕೃಷ್ಣಪ್ಪ, ಎಸ್.ಸಿ. ರವೀಂದ್ರ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಮಂಜುನಾಥ್, ಅಕ್ಷತಾ ಪಾಂಡವಪುರ, ನೆಂಪೆ ದೇವರಾಜ್, ಎಸಿಎಫ್ ಮಧುಸೂದನ್, ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಇದ್ದರು.

thirthahalli news, konanduru lingappa, b swamy rao, malenadu sangharsha samiti, areca garden forest row, bagar hukum farmers protest, shivamogga district news, shivamoggalive news, trench protest







