ಶಿವಮೊಗ್ಗ: ಸಹೋದ್ಯೋಗಿಯೊಬ್ಬರಿಗೆ (Colleague) ಗೂಗಲ್ ಪೇ (Google Pay) ಮೂಲಕ ಹಣ ವರ್ಗಾವಣೆ ಮಾಡಿದ ಬೆನ್ನಲ್ಲೇ, ಮಹಿಳಾ ಅಧಿಕಾರಿಯೊಬ್ಬರ ಬ್ಯಾಂಕ್ ಖಾತೆಯಿಂದ (Bank account) ₹98 ಸಾವಿರ ನಗದು ಆನ್ಲೈನ್ ಮೂಲಕ ನಾಪತ್ತೆಯಾಗಿದೆ. ಈ ಸಂಬಂಧ ಶಿವಮೊಗ್ಗದ ಸಿಇಎನ್ (CEN) ಅಪರಾಧ ಪೊಲೀಸ್ ಠಾಣೆಯಲ್ಲಿ (Crime police station) ಪ್ರಕರಣ ದಾಖಲಾಗಿದೆ.
ಮೊಬೈಲ್ ಹ್ಯಾಕ್ ಮಾಡಿ ವಂಚನೆ
ಸರ್ಕಾರಿ ಇಲಾಖೆಯೊಂದರಲ್ಲಿ ಅಧಿಕಾರಿಯಾಗಿರುವ (Government official) ಮಹಿಳೆ, ತಮ್ಮ ಸಹೋದ್ಯೋಗಿಗೆ ಗೂಗಲ್ ಪೇ ಆ್ಯಪ್ ಮೂಲಕ ₹1,500 ಹಣ ಕಳುಹಿಸಿದ್ದರು. ಇದಾದ ಕೆಲವೇ ಸಮಯದಲ್ಲಿ ಅವರಿಗೆ ತಿಳಿಯದೆ ಮೊಬೈಲ್ಗೆ ಯಾವುದೋ ಆ್ಯಪ್ ಇನ್ಸ್ಟಾಲ್ (App install) ಆಗಿದೆ. ಕೆಲವೇ ಹೊತ್ತಿಗೆ ಮೊಬೈಲ್ ಅನ್ನು ಹ್ಯಾಕ್ (Mobile hack) ಮಾಡಲಾಗಿದೆ.

ಸಂಜಯ ಬನ್ನಿವಾಲ್ ಖಾತೆಗೆ ವರ್ಗಾವಣೆ
ಹ್ಯಾಕ್ ಮಾಡಿದ ಆ್ಯಪ್ ಮೂಲಕ ದೂರುದಾರರ (Complainant) ಬ್ಯಾಂಕ್ ಖಾತೆಯಿಂದ ಸಂಜಯ್ ಬನ್ನಿವಾಲ್ ಎಂಬುವವರ ಖಾತೆಗೆ ಒಟ್ಟು ₹98,000 ಹಣ ಆನ್ಲೈನ್ ಮೂಲಕ ವರ್ಗಾಯಿಸಿಕೊಳ್ಳಲಾಗಿದೆ. ಹಣ ಕಡಿತವಾಗಿರುವುದು ತಿಳಿಯುತ್ತಿದ್ದಂತೆಯೇ ಗೊಂದಲಕ್ಕೀಡಾದ ಮಹಿಳಾ ಅಧಿಕಾರಿ ತಕ್ಷಣವೇ ತಮ್ಮ ಬ್ಯಾಂಕ್ ಖಾತೆಯನ್ನು ಬ್ಲಾಕ್ (Account block) ಮಾಡಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಶಿವಮೊಗ್ಗದ ಸಿ.ಇ.ಎನ್. ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ (Investigation) ನಡೆಸುತ್ತಿದ್ದಾರೆ.

