ಹವಾಮಾನ ವರದಿ: ರಾಜ್ಯದಲ್ಲಿ ಮಳೆಯಾಗುವ ಮುನ್ಸೂಚನೆ ಇದೆ. ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.
ಕರಾವಳಿ ಮತ್ತು ಮಲೆನಾಡು

ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳು ಹಾಗೂ ಉತ್ತರ ಕನ್ನಡ ಜಿಲ್ಲೆಯ ಹಾವೇರಿ ಮತ್ತು ಶಿವಮೊಗ್ಗ ಗಡಿ ಭಾಗಗಳಲ್ಲಿ ಸಂಜೆ ಅಥವಾ ರಾತ್ರಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ. ಜೂನ್ 6ರಂದು ಮುಂಗಾರು ಪ್ರವೇಶಿಸುವ ನಿರೀಕ್ಷೆಯಿದೆ. ಅಲ್ಲಿಯವರೆಗೆ 2 ರಿಂದ 3 ಬಾರಿ ಮಳೆಯಾಗಬಹುದು.
ಮಲೆನಾಡಿನ ಕೊಡಗು, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಮೇ 27ರವರೆಗೆ ಮಳೆಯಾಗಲಿದೆ. ನಂತರ ಮಳೆ ಕ್ಷೀಣಿಸಲಿದೆ. ಈ ಭಾಗದಲ್ಲಿ ಜೂನ್ 7 ಅಥವಾ 8ರಿಂದ ಮುಂಗಾರು ಆರಂಭವಾಗುವ ಸಾಧ್ಯತೆಯಿದೆ.

ಉತ್ತರ ಮತ್ತು ದಕ್ಷಿಣ ಒಳನಾಡು
ಉತ್ತರ ಒಳನಾಡಿನ ಹಾವೇರಿ, ಬಳ್ಳಾರಿ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಮೇ 27ರಿಂದ ಮಳೆ ಕಡಿಮೆಯಾಗುವ ಲಕ್ಷಣಗಳಿವೆ. ಉಳಿದ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಗಾಳಿಯ ಒತ್ತಡ ಹೆಚ್ಚಿದ್ದರೆ ಮಾತ್ರ ಮಳೆಯಾಗಬಹುದು.
ದಕ್ಷಿಣ ಒಳನಾಡಿನ ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಸಂಜೆ ಅಥವಾ ರಾತ್ರಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. ನಂತರ ಮಳೆ ತಗ್ಗಲಿದೆ. ಚಿತ್ರದುರ್ಗ, ದಾವಣಗೆರೆ, ವಿಜಯನಗರ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರುವ ಸಾಧ್ಯತೆ ಇದೆ.
ಮುಂಗಾರು ಚುರುಕಾಗಲಿದೆ
ಬಂಗಾಳಕೊಲ್ಲಿಯಲ್ಲಿ ಜೂನ್ 2ರ ಸುಮಾರಿಗೆ ವಾಯುಭಾರ ಕುಸಿತ ಉಂಟಾಗುವ ಲಕ್ಷಣಗಳಿದೆ. ಇದರಿಂದ ಮುಂಗಾರು ಚುರುಕಾಗುವ ಸಾಧ್ಯತೆಯಿದೆ. ಆದರೆ ಸೋಮಾಲಿಯಾ ಜಟ್ ಸ್ಟ್ರೀಮ್‌ಗಳು ಉತ್ತರಕ್ಕೆ ಸೆಳೆಯಲ್ಪಡುವುದರಿಂದ ಮಹಾರಾಷ್ಟ್ರ ಕರಾವಳಿಯಲ್ಲಿ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದೆ.
