ಶಿವಮೊಗ್ಗ: ಕೆಎಸ್ಆರ್ಟಿಸಿ ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ್ದು ಘಟನೆಯಲ್ಲಿ ಓರ್ವ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಸವಾರನ ಸ್ಥಿತಿ ಗಂಭೀರವಾಗಿದೆ.
ಶಿವಮೊಗ್ಗ ತಾಲೂಕು ಸುತ್ತುಕೋಟೆಯ ಪೆಟ್ರೋಲ್ ಬಂಕ್ ಮುಂಭಾಗ ಇಂದು ಸಂಜೆ ಘಟನೆ ಸಂಭವಿಸಿದೆ. ಮೃತನನ್ನು ಅಬ್ನಾನ್ (23) ಎಂದು ಗುರುತಿಸಲಾಗಿದೆ.

ಹೇಗಾಯ್ತು ಅಪಘಾತ?
ಕೆಎಸ್ಆರ್ಟಿಸಿ ಬಸ್ಸು ಶಿಕಾರಿಪುರದಿಂದ ಶಿವಮೊಗ್ಗ ಕಡೆಗೆ ತೆರಳುತ್ತಿತ್ತು. ಬೈಕಿನಲ್ಲಿದ್ದವರು ಶಿವಮೊಗ್ಗ ಕಡೆಯಿಂದ ಶಿಕಾರಿಪುರದ ಕಡೆಗೆ ತೆರಳುತ್ತಿದ್ದರು. ಸುತ್ತುಕೋಟೆಯ ಶ್ರೀ ಸಪ್ತಕೋಟಿ ಪೆಟ್ರೋಲ್ ಬಂಕ್ ಸಮೀಪ ಬೈಕ್ ಮತ್ತು ಬಸ್ ಮುಖಾಮುಖಿ ಡಿಕ್ಕಿಯಾಗಿವೆ. ಘಟನೆಯಲ್ಲಿ ಅಬ್ನಾನ್ ಎಂಬಾತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹೊತ್ತಿದ ಬೆಂಕಿ, ಹೊರ ಜಿಗದ ಪ್ರಯಾಣಿಕರು
ಪಲ್ಸರ್ ಬೈಕು ನೇರವಾಗಿ ಬಸ್ಸಿನ ರೇಡಿಯೇಟರ್ ಭಾಗಕ್ಕೆ ಗುದ್ದಿದ್ದು, ಅಲಿಯೇ ಸಿಲುಕಿಕೊಂಡಿದೆ. ಅಪಘಾತದ ತೀವ್ರತೆಗೆ ಬೈಕ್ಗೆ ಬೆಂಕಿ ಹೊತ್ತಿಕೊಂಡಿದೆ. ಇನ್ನು ಬೈಕಿನಲ್ಲಿದ್ದವರ ದೇಹಗಳಿಗು ಬೆಂಕಿ ಹೊತ್ತಿತ್ತು. ಅಪಘಾತದಿಂದಾಗಿ ಬಸ್ಸಿನಲ್ಲಿದ್ದ ಪ್ರಯಾಣಿಕರು ಆಘಾತಕ್ಕೊಳಗಾಗಿದ್ದರು. ಅಷ್ಟರಲ್ಲಿ ಬೆಂಕಿ ಕಾಣಿಸುತ್ತಿದ್ದಂತೆ ಆತಂಕಗೊಂಡಿದ್ದಾರೆ. ಬಸ್ಸಿನ ಎಮರ್ಜನ್ಸಿ ಡೋರ್, ಕಿಟಕಿಗಳಿಂದ ಹೊರಗೆ ಜಿಗಿದಿದ್ದಾರೆ. ಘಟನೆಯಿಂದಾಗಿ ಸವಳಂಗ ರಸ್ತೆಯಲ್ಲಿ ಕೆಲ ನಿಮಿಷ ವಾಹನ ಸಂಚಾರ ಸ್ಥಗಿತವಾಗಿತ್ತು.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಡಿವೈಎಸ್ಪಿ ಸಂಜೀವ್ ಕುಮಾರ್, ಕುಂಸಿ ಠಾಣೆಯ ಪಿಎಸ್ಐ ಪಾರ್ವತಿ ಬಾಯಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
