ಶಿವಮೊಗ್ಗ: ಇಲ್ಲಿನ ಬಿ.ಹೆಚ್ ರಸ್ತೆಯ ಬಾರ್ ಒಂದರಲ್ಲಿ ಮದ್ಯ ಸೇವಿಸಿ ಪ್ರಜ್ಞೆ ತಪ್ಪಿ ಬಿದ್ದಿದ್ದ ವ್ಯಕ್ತಿಯೊಬ್ಬರ ಚಿನ್ನದ ಕಡಗ ಹಾಗೂ ಎರಡು ಉಂಗುರಗಳನ್ನು ಕಳವು ಮಾಡಲಾಗಿದೆ. ಕಳುವಾದ ಒಡವೆಗಳ ಒಟ್ಟು ಮೌಲ್ಯ ₹4,25,000 ಎಂದು ಅಂದಾಜಿಸಲಾಗಿದೆ.
ಹೊಟೇಲ್ ಉದ್ಯಮಿಯೊಬ್ಬರು ಶಿವಮೊಗ್ಗ ನಗರದ ಬಿ.ಹೆಚ್ ರಸ್ತೆಯಲ್ಲಿರುವ ಬಾರ್ ಆಂಡ್ ರೆಸ್ಟೋರೆಂಟ್ಗೆ ಮದ್ಯಪಾನ ಮಾಡಲು ಹೋಗಿದ್ದರು. ಮದ್ಯಪಾನ ಮಾಡಿದ್ದ ಉದ್ಯಮಿ ರಾತ್ರಿ 11:30ಕ್ಕೆ ಬಾರ್ ಒಳಗಡೆಯೇ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ನಂತರ ಬಾರ್ನ ಸಿಬ್ಬಂದಿ ಅವರನ್ನು ಎತ್ತಿಕೊಂಡು ಬಂದು ಹೊರಗೆ ಬಿಟ್ಟು, ಬಾರ್ ಬಾಗಿಲು ಹಾಕಿಕೊಂಡು ಹೋಗಿದ್ದಾರೆ ಎಂದು ಆರೋಪಿಸಲಾಗಿದೆ.

ಮದ್ಯದ ಅಮಲು ಇಳಿದ ನಂತರ ವ್ಯಕ್ತಿ ಎಚ್ಚರಗೊಂಡು ನೋಡಿದಾಗ ಕಳವು ನಡೆದಿರುವುದು ಗೊತ್ತಾಗಿದೆ. ಅವರ ಕೈಯಲ್ಲಿದ್ದ ₹3,10,000 ಮೌಲ್ಯದ 31 ಗ್ರಾಂ ತೂಕದ ಬಂಗಾರದ ಕಡಗ ಹಾಗೂ ಬಲಗೈ ಬೆರಳಿನಲ್ಲಿದ್ದ ₹1,15,000 ಮೌಲ್ಯದ 10 ಗ್ರಾಂ ತೂಕದ ಎರಡು ಬಂಗಾರದ ಉಂಗುರಗಳನ್ನು ಕಳವು ಮಾಡಲಾಗಿದೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
