ಆಗುಂಬೆ ಘಾಟಿ: ಭಾರಿ ವಾಹನ ಸಂಚಾರ ನಿಷೇಧ, ಕಾರಣವೇನು? ನಿಷೇಧ ಎಷ್ಟು ದಿನ?

ಶಿವಮೊಗ್ಗ: ರಾಷ್ಟ್ರೀಯ ಹೆದ್ದಾರಿ 169ಎ ವ್ಯಾಪ್ತಿಯ ಆಗುಂಬೆ ಘಾಟಿಯಲ್ಲಿ ಜೂನ್ 15ರಿಂದ ಮಳೆಗಾಲ ಮುಗಿಯುವವರೆಗೆ ಜಲ್ಲಿ ಮತ್ತು ಸರಕು ಸಾಗಣೆಯ ಭಾರಿ ವಾಹನಗಳ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶಿಸಿದ್ದಾರೆ.

ಹುಲಿಕಲ್ ಘಾಟಿಯಲ್ಲಿ ಭೂಕುಸಿತದ ತಾತ್ಕಾಲಿಕ ರಕ್ಷಣಾತ್ಮಕ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಹೀಗಾಗಿ ತೀರ್ಥಹಳ್ಳಿ – ಮಲ್ಪೆ ರಸ್ತೆಯ ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳ ದಟ್ಟಣೆ ಹೆಚ್ಚಾಗಿದೆ. ಇದು ಮುಂದುವರಿದರೆ ರಸ್ತೆ ಕುಸಿತ ಮತ್ತು ಅಪಘಾತಗಳು ಸಂಭವಿಸುವ ಆತಂಕವಿದೆ. ಅಲ್ಲದೆ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಗೂ ಹಾವೇರಿ ಜಿಲ್ಲೆಗಳಿಂದ ಮಣಿಪಾಲ, ಉಡುಪಿ, ಮಂಗಳೂರಿನ ಆಸ್ಪತ್ರೆಗಳಿಗೆ ತೆರಳುವ ರೋಗಿಗಳಿಗೆ ಸಂಚಾರ ಬಂದ್ ಆದಲ್ಲಿ ತೀವ್ರ ತೊಂದರೆಯಾಗಲಿದೆ. ಈ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಭಾರಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.

AGUMBE-GHAT-THIRTHAHALLI.

ಪರ್ಯಾಯ ಮಾರ್ಗಗಳು

ಮಾರ್ಗ 1: ತೀರ್ಥಹಳ್ಳಿಯಿಂದ ಉಡುಪಿ ಕಡೆಗೆ: ತೀರ್ಥಹಳ್ಳಿ-ನಗರ-ನಾಗೋಡಿ-ಕೊಲ್ಲೂರು-ಕುಂದಾಪುರ-ಉಡುಪಿ ಅಥವಾ ತೀರ್ಥಹಳ್ಳಿ-ಶೃಂಗೇರಿ-ಕೆರೆಕಟ್ಟೆ-ಬಜಗೋಳಿ-ಕಾರ್ಕಳ-ಉಡುಪಿ ಮಾರ್ಗವಾಗಿ ಸಂಚರಿಸಬೇಕು.

ಮಾರ್ಗ 2: ಉಡುಪಿಯಿಂದ ತೀರ್ಥಹಳ್ಳಿ ಕಡೆಗೆ: ಉಡುಪಿ-ಕುಂದಾಪುರ-ಕೊಲ್ಲೂರು-ನಾಗೋಡಿ-ನಗರ-ತೀರ್ಥಹಳ್ಳಿ ಅಥವಾ ಕಾರ್ಕಳ-ಬಜಗೋಳಿ-ಕೆರೆಕಟ್ಟೆ-ಶೃಂಗೇರಿ-ತೀರ್ಥಹಳ್ಳಿ ಮಾರ್ಗವಾಗಿ ಸಂಚರಿಸಲು ಸೂಚಿಸಲಾಗಿದೆ.