ಶಿವಮೊಗ್ಗ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ಇಲ್ಲಿನ ಚೈತನ್ಯ ಸೌಧದಲ್ಲಿ ಹಮ್ಮಿಕೊಂಡಿದ್ದ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದಡಿ 110 ಮಹಿಳಾ ಸದಸ್ಯರಿಗೆ ವಾಹನ ಚಾಲನಾ ಪರವಾನಿಗೆ (ಡಿಎಲ್) ವಿತರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಚನ್ನಬಸಪ್ಪ, ‘ದ್ವಿಚಕ್ರ, ಕಾರು ಮತ್ತು ಆಟೋ ಚಾಲನೆ ತರಬೇತಿ ಪಡೆದು ಪರವಾನಿಗೆ ಹೊಂದಿರುವ ಮಹಿಳೆಯರು ಸ್ವ ಉದ್ಯೋಗ ಹಾಗೂ ಕುಟುಂಬ ನಿರ್ವಹಣೆಗೆ ವಾಹನ ಬಳಸುತ್ತಿರುವುದು ಶ್ಲಾಘನೀಯ. ಧರ್ಮಸ್ಥಳ ಯೋಜನೆಯ ಸಾಮಾಜಿಕ ಮತ್ತು ಮಹಿಳಾ ಪರ ಕಾರ್ಯಕ್ರಮಗಳು ಇತರರಿಗೆ ಮಾದರಿʼ ಎಂದರು.

ಇದೇ ಸಂದರ್ಭದಲ್ಲಿ ರಾಮೇಶ್ವರ ಮತ್ತು ಪರಿಸರ ಎಂಬ ನೂತನ ಜ್ಞಾನವಿಕಾಸ ಕೇಂದ್ರಗಳನ್ನು ಉದ್ಘಾಟಿಸಿ, ದಾಖಲಾತಿ ಹಸ್ತಾಂತರಿಸಲಾಯಿತು. ಅದ್ವೈತಾ ಆಯುರ್ವೇದ ಚಿಕಿತ್ಸಾಲಯದ ಡಾ. ಪಲ್ಲವಿ ಕೆ.ಎಸ್. ಅಧ್ಯಕ್ಷತೆ ವಹಿಸಿದ್ದರು. ಯೋಜನೆಯ ಜಿಲ್ಲಾ ನಿರ್ದೇಶಕ ಮುರಳೀಧರ ಶೆಟ್ಟಿ ಕೆ. ಜ್ಞಾನವಿಕಾಸ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಕೇಂದ್ರ ಕಚೇರಿಯ ಯೋಜನಾಧಿಕಾರಿ ಮಲ್ಲಿಕಾ ಕಾರ್ಯಕ್ರಮದ ಅನುಷ್ಠಾನದ ಕುರಿತು ಹಾಗೂ ತಾಲೂಕು ಕ್ಷೇತ್ರ ಯೋಜನಾಧಿಕಾರಿ ಯಶೋಧ ಯೋಜನೆಯ ಪ್ರಯೋಜನಗಳ ಬಗ್ಗೆ ಮಾತನಾಡಿದರು. ತಾಲೂಕು ಸಮನ್ವಯಾಧಿಕಾರಿ ಚೇತನಾ ಹಾಗೂ ಜ್ಞಾನವಿಕಾಸ ಸಂಯೋಜಕಿಯರು ಉಪಸ್ಥಿತರಿದ್ದರು.