ಶಿವಮೊಗ್ಗ: ಜಿಲ್ಲಾ ವ್ಯಾಪ್ತಿಯಲ್ಲಿ ಸ್ಥಾಪಿಸಲಾಗಿರುವ 258 ಗ್ರಾಮ ಪಂಚಾಯತಿ ಅರಿವು ಕೇಂದ್ರಗಳ ಪೈಕಿ, ಪ್ರಸ್ತುತ ಖಾಲಿ ಇರುವ 14 ಗ್ರಾಮ ಪಂಚಾಯತಿ ಅರಿವು ಕೇಂದ್ರಗಳಿಗೆ ತಲಾ ಒಂದರಂತೆ ಒಟ್ಟು 14 ಮೇಲ್ವಿಚಾರಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ಹುದ್ದೆಗಳು ತೀರ್ಥಹಳ್ಳಿ ತಾಲೂಕಿನ ಬಾಂಡ್ಯ ಕುಕ್ಕೆ ಮತ್ತು ಹೊಸಹಳ್ಳಿ, ಸಾಗರ ತಾಲೂಕಿನ ಕುದರೂರು, ಕಲ್ಮನೆ ಮತ್ತು ಹೆಗ್ಗೋಡು, ಭದ್ರಾವತಿ ತಾಲೂಕಿನ ವೀರಾಪುರ ಮತ್ತು ಕೂಡ್ಲಿಗೆರೆ, ಹೊಸನಗರ ತಾಲೂಕಿನ ಸುಳುಗೋಡು ಮತ್ತು ತ್ರಿಣಿವೆ, ಸೊರಬ ತಾಲೂಕಿನ ಭಾರಂಗಿ ಮತ್ತು ಹರೀಶಿ, ಶಿಕಾರಿಪುರ ತಾಲೂಕಿನ ಮುದ್ದನಹಳ್ಳಿ ಮತ್ತು ಅಂಬಾರಗೊಪ್ಪ ಹಾಗೂ ಶಿವಮೊಗ್ಗ ತಾಲೂಕಿನ ಚೋರಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಖಾಲಿ ಇದ್ದು, ನಿಯಮಾನುಸಾರ ರೋಸ್ಟರ್ ಬಿಂದುಗಳ ಆಧಾರದ ಮೇಲೆ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.

ಅರ್ಹ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಭರ್ತಿ ಮಾಡಿ, ಧೃಢೀಕರಿಸಿದ ಅಗತ್ಯ ದಾಖಲೆಗಳೊಂದಿಗೆ ಸಂಬಂಧಪಟ್ಟ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳಿಗೆ (PDO) ಖುದ್ದಾಗಿ ಅಥವಾ ನೊಂದಾಯಿತ ಅಂಚೆ ಮೂಲಕ ಸಲ್ಲಿಸಬೇಕಾಗಿದ್ದು, ಅರ್ಜಿಗಳನ್ನು ಸಲ್ಲಿಸಲು ಜುಲೈ 8 ಕೊನೆಯ ದಿನವಾಗಿದೆ.
ಈ ಹುದ್ದೆಗಳಿಗೆ ಅಗತ್ಯವಿರುವ ಅರ್ಜಿ ನಮೂನೆಗಳು ಆಯಾ 14 ಗ್ರಾಮ ಪಂಚಾಯತಿಗಳಲ್ಲಿ ಲಭ್ಯವಿದ್ದು, ಅಭ್ಯರ್ಥಿಗಳು ಜಿಲ್ಲೆಯ ಅಧಿಕೃತ ವೆಬ್ಸೈಟ್ https://shivamogga.nic.in ಮೂಲಕವೂ ಡೌನ್ಲೋಡ್ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಆಯಾ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಶಿವಮೊಗ್ಗ ಜಿಲ್ಲಾ ಪಂಚಾಯತ್ನ ಉಪ ಕಾರ್ಯದರ್ಶಿ (ಆಡಳಿತ) ಹಾಗೂ ಗ್ರಾಮ ಪಂಚಾಯತಿ ಗ್ರಂಥಾಲಯ ಮೇಲ್ವಿಚಾರಕರ ನೇಮಕಾತಿ ಸಮಿತಿ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

