ಶಿವಮೊಗ್ಗ: ಇಂದಿನ ಆರೋಗ್ಯ ವ್ಯವಸ್ಥೆಯಲ್ಲಿ ಚಿಕಿತ್ಸಾ ಗುಣಮಟ್ಟ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಫಾರ್ಮಸಿಸ್ಟ್ಗಳಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಸಿಗಬೇಕಾದ ಸೂಕ್ತ ಗೌರವ ಮತ್ತು ಮಾನ್ಯತೆ ಇನ್ನೂ ದೊರೆಯುತ್ತಿಲ್ಲ ಎಂದು ಉಪ ಔಷಧ ನಿಯಂತ್ರಕ ಡಾ. ಖಾಲಿದ್ ಅಹಮದ್ ಖಾನ್ ಬೇಸರ ವ್ಯಕ್ತಪಡಿಸಿದರು. ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.
ರಾಷ್ಟ್ರೀಯ ಔಷಧ ಮಹಾವಿದ್ಯಾಲಯ, ರಾಜ್ಯ ಔಷಧ ವಿಜ್ಞಾನ ಪರಿಷತ್ತು, ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆ ಹಾಗೂ ಜಿಲ್ಲಾ ಕೆಮಿಸ್ಟ್ ಮತ್ತು ಡ್ರಗ್ಗಿಸ್ಟ್ ಅಸೋಸಿಯೇಷನ್ ಸಂಯುಕ್ತಾಶ್ರಯದಲ್ಲಿ ಔಷಧ ವಿತರಕರಿಗಾಗಿ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಫಾರ್ಮಸಿಸ್ಟ್ ವೃತ್ತಿ ಸಾಮಾಜಿಕ ಬದ್ಧತೆಯ ಜವಾಬ್ದಾರಿಯಾಗಿದೆ. ಇಂದಿನ ಡಿ.ಫಾರ್ಮಾ ಪದವೀಧರರು ವೈದ್ಯರಿಗೂ ಔಷಧಿ ಕುರಿತು ಸಲಹೆ ನೀಡುವ ಮಟ್ಟದ ಪರಿಣತಿ ಹೊಂದಿದ್ದು, ನಿರಂತರ ಜ್ಞಾನ ನವೀಕರಣದ ಮೂಲಕ ಸಾಮರ್ಥ್ಯ ವೃದ್ಧಿಸಿಕೊಳ್ಳಬೇಕು ಎಂದರು.
ರಾಜ್ಯ ಔಷಧ ವಿಜ್ಞಾನ ಪರಿಷತ್ತಿನ ಕುಲಸಚಿವ ಡಾ. ಸಿರ್ಸೆ ಕ್ರಾಂತಿಕುಮಾರ್ ಮಾತನಾಡಿ, ಪರಿಷತ್ತು ದೇಶದಲ್ಲೇ ತಂತ್ರಜ್ಞಾನ ಅಳವಡಿಕೆಯಲ್ಲಿ ಮುಂಚೂಣಿಯಲ್ಲಿದ್ದು, ಮೈಕ್ರೋಚಿಪ್ ಅಳವಡಿಸಿದ ನೋಂದಣಿ ಪ್ರಮಾಣಪತ್ರ, ಕ್ಯೂಆರ್ ಕೋಡ್ ಗುರುತಿನ ಚೀಟಿ ಒದಗಿಸಿದೆ. ನಿರಂತರ ಕಲಿಕೆಗೆ ಉತ್ತೇಜನ ನೀಡಲು ಔಷಧ ಮಾಹಿತಿ ಕೇಂದ್ರ ಹಾಗೂ ಕೌಶಲ್ಯಾಭಿವೃದ್ದಿ ಕೇಂದ್ರ ಆರಂಭಿಸಲಾಗಿದೆ. ಸಾಧಕ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ ಫಾರ್ಮಸಿ ಟ್ರಸ್ಟ್ ಮೂಲಕ ವಿಮಾ ಸೌಲಭ್ಯ ಒದಗಿಸಲಾಗುತ್ತಿದೆ ಎಂದರು.
ಸಹಾಯಕ ಔಷಧ ನಿಯಂತ್ರಕರಾದ ಡಾ. ವೀರೇಶ್ ಬಾಬು, ವಿಶಾಲಾಕ್ಷಿ ಹಾಗೂ ಮನೋವೈದ್ಯ ಡಾ. ಅರವಿಂದ್ ಎಸ್.ಟಿ. ಉಪನ್ಯಾಸ ನೀಡಿದರು. ಕಾಲೇಜಿನ ಪ್ರಾಂಶುಪಾಲ ಡಾ. ಎಸ್.ಎನ್. ಶ್ರೀಹರ್ಷಾ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಮಧುಕರ್ ಶೆಟ್ಟಿ, ಗಣೇಶ್ ಎಸ್ ಉಪಸ್ಥಿತರಿದ್ದರು.
