ಸಾಗರ: ಶಾಲಾ–ಕಾಲೇಜುಗಳ ಸುತ್ತಮುತ್ತ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳು ಲಭ್ಯವಾಗುತ್ತಿವೆ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆ ಎಚ್ಚೆತ್ತ ಪೊಲೀಸರು, ಶನಿವಾರ ಸಾಗರ ಪಟ್ಟಣ ಹಾಗೂ ಗ್ರಾಮಾಂತರ ವ್ಯಾಪ್ತಿಯ 10 ಪ್ರಮುಖ ಸ್ಥಳಗಳಲ್ಲಿ ದಿಢೀರ್ ದಾಳಿ ನಡೆಸಿ ವ್ಯಾಪಕ ಪರಿಶೀಲನೆ ನಡೆಸಿದ್ದಾರೆ.
ಬಳಸಗೋಡು ಪದವಿ ಕಾಲೇಜು ಸಮೀಪ, ಹೆನ್ನುಶಾಪ್ ಹಾಗೂ ಸರ್ಕಾರಿ ಪಿಯು ಕಾಲೇಜು ಸೇರಿದಂತೆ ವಿವಿಧೆಡೆ ದಾಳಿ ನಡೆದಿದೆ. ಕಾರ್ಯಾಚರಣೆ ವೇಳೆ ಬಳಸಗೋಡು ಪ್ರದೇಶದ ಹೆನ್ನು ಶಾಪ್ ಬಳಿ ಅಲ್ಪ ಪ್ರಮಾಣದ ಗಾಂಜಾ ಪತ್ತೆಯಾಗಿದ್ದು, ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜೊತೆಗೆ ಅನುಮಾನಾಸ್ಪದವಾಗಿ ಕಂಡುಬಂದ ಆರು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಡ್ರೋನ್ ಕಣ್ಗಾವಲು, ಅನಗತ್ಯ ಕಾಲಹರಣಕ್ಕೆ ಬ್ರೇಕ್
ಸುದ್ದಿಗಾರರೊಂದಿಗೆ ಮಾತನಾಡಿದ ಡಿವೈಎಸ್ಪಿ ಡಾ. ಬೆನಕ ಪ್ರಸಾದ್, ‘ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಮಾದಕ ವಸ್ತುಗಳ ನಿಯಂತ್ರಣಕ್ಕಾಗಿ ಈ ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದೆ. ಶಾಲಾ-ಕಾಲೇಜುಗಳಿಗೆ ಹೋಗುವ ನೆಪದಲ್ಲಿ ಕೆಲವು ವಿದ್ಯಾರ್ಥಿಗಳು ಬಸ್ ನಿಲ್ದಾಣ ಸೇರಿದಂತೆ ವಿವಿಧೆಡೆ ಅನಗತ್ಯವಾಗಿ ಕಾಲ ಕಳೆಯುತ್ತಿರುವ ದೂರುಗಳಿವೆ. ಅಂತಹ ಸ್ಥಳಗಳ ಮೇಲೆ ತೀವ್ರ ನಿಗಾ ಇರಿಸಲಾಗಿದೆ. ಪೋಷಕರು ಹಾಗೂ ಕಾಲೇಜು ಮಂಡಳಿಯ ಮನವಿ ಮೇರೆಗೆ ಕೆಲವು ಪ್ರಮುಖ ಪ್ರದೇಶಗಳಲ್ಲಿ ಡ್ರೋಣ್ ಹಾರಿಸಿ ವಿದ್ಯಾರ್ಥಿಗಳ ಇರುವಿಕೆಯನ್ನು ಪತ್ತೆ ಹಚ್ಚಿ ಎಚ್ಚರಿಕೆ ನೀಡಲಾಗಿದೆ’ ಎಂದರು.
‘ಶಾಲೆ ಬಸ್ ಹಾಗೂ ಓಮಿನಿಗಳಲ್ಲಿ ನಿಗದಿಗಿಂತ ಹೆಚ್ಚಿನ ಮಕ್ಕಳನ್ನು ತುಂಬಿಕೊಂಡು ಹೋಗುವಂತಿಲ್ಲ. ಚಾಲಕರು ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದಾರಾ ಎಂಬುದನ್ನು ಪರೀಕ್ಷಿಸಲು ವಿಶೇಷ ತಪಾಸಣೆ ನಡೆಸಲಾಗುವುದು’ ಎಂದು ತಿಳಿಸಿದರು.
ಸಾರ್ವಜನಿಕರು ತಮ್ಮ ಸುತ್ತಮುತ್ತ ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಮಾರಾಟ ಅಥವಾ ಸೇವನೆ ಕಂಡುಬಂದರೆ ತಕ್ಷಣ ಪೊಲೀಸರಿಗೆ ಅಥವಾ ಇಲಾಖೆಯ ಮೊಬೈಲ್ ಆ್ಯಪ್ ಮೂಲಕ ಮಾಹಿತಿ ನೀಡಬೇಕು. ಮಾಹಿತಿ ನೀಡುವವರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ಡಾ. ಬೆನಕ ಪ್ರಸಾದ್ ತಿಳಿಸಿದರು. ಕಾರ್ಯಾಚರಣೆಯಲ್ಲಿ ನಗರ ಹಾಗೂ ಗ್ರಾಮಾಂತರ ಠಾಣೆಗಳ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.