ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಯಲ್ಲಿ ತಮಗೆ ಅವಕಾಶ ಸಿಗದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಭದ್ರಾವತಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಕೆ. ಸಂಗಮೇಶ್ವರ, ನಾಳೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.➤ ಸುದ್ದಿಯ ಮುಂದಿನ 6 ಪ್ಯಾರಾಗಳು ಕೆಳಗಿವೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಹಾಗೂ ಪಕ್ಷದ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಿಪಡಿಸಿದರು.

ನಾಲ್ಕು ಬಾರಿ ಗೆದ್ದು ಕಾಂಗ್ರೆಸ್ ಪಕ್ಷಕ್ಕೆ ಅತ್ಯಂತ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ಬಿಜೆಪಿ ವಿರುದ್ಧ ದಿಟ್ಟವಾಗಿ ನಿಂತು, ನನ್ನ ವರ್ಚಸ್ಸಿನಿಂದ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿಕೊಂಡು ಬಂದಿದ್ದೇನೆ. ಆದರೆ, ಬೇರೆ ಪಕ್ಷದಿಂದ ಬಂದು ಕೇವಲ ಒಂದು ಬಾರಿ ಗೆದ್ದವರಿಗೂ ಸಚಿವ ಸ್ಥಾನ ನೀಡಲಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಸಂಗಮೇಶ್ವರ ಹೇಳಿಕೆಯ ಹೈಲೈಟ್ಸ್
ಮೋಸವಾಗಿದೆ: ಬಿಜೆಪಿ ಸರ್ಕಾರ ಇದ್ದಾಗ ದುಡ್ಡು ಹಾಗೂ ಮಂತ್ರಿಗಿರಿ ಆಮಿಷವೊಡ್ಡಿದರೂ ಪಕ್ಷ ಬಿಡದೆ ನಿಷ್ಠೆ ತೋರಿದ್ದೆ. ನಾಲ್ಕು ಬಾರಿ ಗೆದ್ದವನಿಗೆ ಈ ರೀತಿ ಮೋಸ ಮಾಡಿದರೆ, ಪಕ್ಷಕ್ಕಾಗಿ ಶ್ರಮಿಸುವ ಸಾಮಾನ್ಯ ಕಾರ್ಯಕರ್ತರನ್ನು ಹೇಗೆ ಗುರುತಿಸುತ್ತಾರೆ.
ಜನರ ಪ್ರಶ್ನೆ: ಹಿರಿಯ ಶಾಸಕನಾದ ನಿಮಗೆ ಯಾಕೆ ಸಚಿವ ಸ್ಥಾನ ನೀಡಿಲ್ಲ ಎಂದು ಕ್ಷೇತ್ರದ ಜನರು, ಕಾರ್ಯಕರ್ತರು ಮತ್ತು ಮುಖಂಡರು ಪ್ರಶ್ನಿಸುತ್ತಿದ್ದಾರೆ. ಭದ್ರಾವತಿಗೆ ತೆರಳಿ ಜನರ ಹಾಗೂ ಮುಖಂಡರ ಜೊತೆ ಚರ್ಚಿಸಿ ಅವರ ಮಾತಿಗೆ ಸಂಪೂರ್ಣ ಮನ್ನಣೆ ನೀಡುತ್ತೇನೆ.
ಹೈಕಮಾಂಡ್ ವಿರುದ್ಧ ಆಕ್ರೋಶ: ಕಳೆದ ಬಾರಿ ಸಚಿವರಾಗಿದ್ದವರಿಗೇ ಪುನಃ ಸಚಿವ ಸ್ಥಾನ ನೀಡಲಾಗಿದೆ. ದೆಹಲಿಗೆ ಹೋಗಿ ಹೈಕಮಾಂಡ್ಗೆ ಕಿವಿ ಊದುವವರಿಗೆ ಮಾತ್ರ ಮಂತ್ರಿಗಿರಿ ಸಿಗುತ್ತಿದೆ. ನೊಂದಿರುವ ಎಲ್ಲ ಶಾಸಕರು ಒಂದೇ ಕಡೆ ಸೇರಿ ಮುಂದಿನ ರಾಜಕೀಯ ನಿರ್ಧಾರ ಕೈಗೊಳ್ಳುತ್ತೇವೆ. ನಾಳೆ ರಾಜೀನಾಮೆ ನೀಡಲು ತೀರ್ಮಾನಿಸಿದ್ದೇನೆ.
ಅಹಂಕಾರದ ಮಾತು: ಚುನಾವಣೆಯಲ್ಲಿ 136 ಸ್ಥಾನಗಳು ಬಂದಿರುವುದರಿಂದ ಕಾಂಗ್ರೆಸ್ನಲ್ಲಿ ಕೆಲವರಿಗೆ ಹಮ್ಮು ಬಂದಿದೆ. ಹತ್ತು ಮಂದಿ ಶಾಸಕರು ರಾಜೀನಾಮೆ ನೀಡಿದರೆ ಸರ್ಕಾರಕ್ಕೇನು ಆಗುವುದಿಲ್ಲ ಎಂದು ಅವರು ಭಾವಿಸಿದ್ದಾರೆ ಎಂದು ಸಂಗಮೇಶ್ವರ ವಾಗ್ದಾಳಿ ನಡೆಸಿದರು.