ವಿಕಸಿತ್‌ ಭಾರತ್‌ ರಸಪ್ರಶ್ನೆ ಸ್ಪರ್ಧೆ, ಯಾರೆಲ್ಲ ಭಾಗವಹಿಸಬಹುದು? ಇಲ್ಲಿದೆ ಡಿಟೇಲ್ಸ್‌

ಶಿವಮೊಗ್ಗ: ದೇಶದ ಅಭಿವೃದ್ಧಿಯಲ್ಲಿ ಯುವಜನರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೈ ಭಾರತ್‌ ವಿವಿಧ ಅವಕಾಶಗಳನ್ನು ಕಲ್ಪಿಸುತ್ತಿದೆ. ಜಿಲ್ಲೆಯ 15ರಿಂದ 29 ವರ್ಷದೊಳಗಿನ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ವಿಕಸಿತ ಭಾರತ ಕ್ವಿಜ್‌ನಲ್ಲಿ ಭಾಗವಹಿಸಿ ತಮ್ಮ ಜ್ಞಾನ ಹಾಗೂ ಪ್ರತಿಭೆಯನ್ನು ರಾಷ್ಟ್ರಮಟ್ಟದಲ್ಲಿ ಪ್ರದರ್ಶಿಸಬೇಕು ಎಂದು ಜಿಲ್ಲಾ ಯುವ ಅಧಿಕಾರಿ ಐಶ್ವರ್ಯ ಶ್ರೀನಿವಾಸ್ ಹೇಳಿದರು.

ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆಪ್ಟೆಂಬರ್ 30ರವರೆಗೆ ಆನ್‌ಲೈನ್‌ನಲ್ಲಿ ಕ್ವಿಜ್ ನಡೆಯಲಿದೆ. ವಿವಿಧ ಭಾರತೀಯ ಭಾಷೆಗಳಲ್ಲಿ ಭಾಗವಹಿಸಲು ಅವಕಾಶವಿದ್ದು, ಭಾರತ, ಭಾರತೀಯ ಪರಂಪರೆ, ದೇಶದ ಸಾಧನೆಗಳು, ಅಭಿವೃದ್ಧಿಯ ಪಯಣ ಹಾಗೂ ವಿಕಸಿತ್‌ ಭಾರತ್‌ @ 2047ರ ದೃಷ್ಟಿಕೋನಕ್ಕೆ ಸಂಬಂಧಿಸಿದ ಪ್ರಶ್ನೆಗಳು ಇರಲಿವೆ. ಒಟ್ಟು 20 ಪ್ರಶ್ನೆಗಳಿಗೆ 10 ನಿಮಿಷಗಳ ಅವಧಿಯಲ್ಲಿ ಉತ್ತರಿಸಬೇಕು ಎಂದರು.

Vikasit-Bharath-Essay-Compitation-in-Shimoga

ಕ್ವಿಜ್‌ನಲ್ಲಿ ಉತ್ತಮ ಸಾಧನೆ ಮಾಡುವ ಅಗ್ರ ಶೇ.10ರಷ್ಟು,  ಗರಿಷ್ಠ ನಾಲ್ಕು ಲಕ್ಷ ಸ್ಪರ್ಧಿಗಳು ಮುಂದಿನ ಹಂತವಾದ ವಿಕಸಿತ ಭಾರತ ಪ್ರಬಂಧ ಸ್ಪರ್ಧೆಗೆ ಅರ್ಹರಾಗಲಿದ್ದಾರೆ. ನಂತರ ಜಿಲ್ಲಾ ಚಾಂಪಿಯನ್‌ಶಿಪ್, ರಾಜ್ಯ, ಕೇಂದ್ರಾಡಳಿತ ಪ್ರದೇಶ ಹಾಗೂ ರಾಷ್ಟ್ರೀಯ ಹಂತಗಳು ನಡೆಯಲಿವೆ ಎಂದು ತಿಳಿಸಿದರು.

ಪ್ರಬಂಧ ಸ್ಪರ್ಧೆ ಅಕ್ಟೋಬರ್ 5ರಿಂದ 19ರವರೆಗೆ, ಜಿಲ್ಲಾ ಚಾಂಪಿಯನ್‌ಶಿಪ್‌ ನವೆಂಬರ್ 10ರಿಂದ 16ರವರೆಗೆ ಹಾಗೂ ರಾಜ್ಯಮಟ್ಟ ನವೆಂಬರ್ 17ರಿಂದ ಡಿಸೆಂಬರ್ 7ರವರೆಗೆ ನಡೆಯಲಿದೆ. ಅಂತಿಮವಾಗಿ 2027ರ ಜನವರಿ 10ರಿಂದ 12ರವರೆಗೆ ನವದೆಹಲಿಯಲ್ಲಿ ರಾಷ್ಟ್ರೀಯ ಮಟ್ಟ ನಡೆಯಲಿದೆ ಎಂದರು.

ಆಯ್ಕೆಯಾಗುವ ಯುವ ನಾಯಕರಿಗೆ ರಾಷ್ಟ್ರೀಯ ನಾಯಕರು, ನೀತಿ ನಿರೂಪಕರು ಹಾಗೂ ತಜ್ಞರೊಂದಿಗೆ ಸಂವಾದ ನಡೆಸುವ ಮತ್ತು ತಮ್ಮ ಆಲೋಚನೆಗಳನ್ನು ಮಂಡಿಸುವ ಅವಕಾಶ ದೊರೆಯಲಿದೆ ಎಂದು ಹೇಳಿದರು. ಶಿವಮೊಗ್ಗ ಜಿಲ್ಲೆಯ 15ರಿಂದ 29 ವರ್ಷದ ಪ್ರತಿ ಯುವಕರು ಸೆ.30 ಕೊನೆಯ ದಿನವಾಗಿರುವುದರಿಂದ ವಿಳಂಬ ಮಾಡದೆ ಮೈ ಭಾರತ್‌ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡು ಕ್ವಿಜ್‌ನಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ